ಮಾಜಿ ಸೈನಿಕ ರಹಿಮಾನ್ ಹೆಬ್ಬಳ್ಳಿಗೆ ಹುಯಿಲಗೋಳದಲ್ಲಿ ಅದ್ಧೂರಿ ಸ್ವಾಗತ
ಗದಗ, ಅ. 2: ತಾಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ, ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ‘ನಾಯಕ’ ರಹಿಮಾನ್ ಎಂ. ಹೆಬ್ಬಳ್ಳಿ ಅವರನ್ನು ಗ್ರಾಮಸ್ಥರು, ಸ್ನೇಹಿತರು ಹಾಗೂ ಯುವಕರು ಅದ್ಧೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ರಹಿಮಾನ್ ಹೆಬ್ಬಳ್ಳಿ ಅವರನ್ನು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಹಾಗೂ ಗ್ರಾಮಸ್ಥರು ಹೂಮಾಲೆ ಹಾಕಿ ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ತೆರೆದ ಜೀಪಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮನೆವರೆಗೆ ಕರೆತರಲಾಯಿತು.
ಮೆರವಣಿಗೆ ವೇಳೆ ನಾಡಕವಿ ಹುಯಿಲಗೋಳ ನಾರಾಯಣರಾವ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಲಾಯಿತು. ಗ್ರಾಮದ ಶ್ರೀ ಸೂಗೀರೇಶ್ವರ, ಶ್ರೀ ದುರ್ಗಾದೇವಿ ಹಾಗೂ ಶ್ರೀ ಮಾರುತಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಯುವಕರು ‘ಭಾರತ ಮಾತಾಕೀ ಜೈ’, ‘ನಾಯಕ ರಹಿಮಾನ್ ಹೆಬ್ಬಳ್ಳಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಗ್ರಾಮಸ್ಥರು ವಿವಿಧೆಡೆ ಸನ್ಮಾನಿಸಿ ನಿವೃತ್ತ ಸೈನಿಕರಿಗೆ ಶುಭ ಹಾರೈಸಿದರು. ದೇವಸ್ಥಾನ ಮಂಡಳಿಗಳು, ಪಂಚಾಯಿತಿ ಸದಸ್ಯರು, ಸ್ನೇಹಿತರು ಹಾಗೂ ಗ್ರಾಮಸ್ಥರು ಸಹ ಸನ್ಮಾನಿಸಿದರು.
ರಹಿಮಾನ್ ಹೆಬ್ಬಳ್ಳಿ ಅವರು ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ತಂದೆ ಮೌಲಾಸಾಬ್ ಮಾತನಾಡಿ, ತಮ್ಮ ಐದು ಮಕ್ಕಳಲ್ಲಿ ನಾಲ್ವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇಬ್ಬರು ನಿವೃತ್ತ ಸೈನಿಕರಾಗಿದ್ದಾರೆ ಹಾಗೂ ಮತ್ತೊಬ್ಬರು ಇನ್ನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.