“ವಸತಿ ನಿಲಯಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ”
ಲೋಕದರ್ಶನ ವರದಿ
ವಿಜಯಪುರ 03: ವಿಜಯಪುರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಕಂಡುಬರುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ತಕ್ಷಣ ನಿವಾರಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಸ್ಥಳ ಪರೀಶೀಲನೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ವಸತಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ, ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ಹಾಸಿಗೆ ಹಾಗೂ ಹೊದಿಕೆ, ಗುಣಮಟ್ಟದ ಆಹಾರ, ಅಡುಗೆಮನೆ, ಸುರಕ್ಷತೆ ಮತ್ತು ಅಗತ್ಯ ಪೀಠೋಪಕರಣಗಳ ಕೊರತೆಯಿರುವ ಕಡೆ ತಕ್ಷಣ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಅದೇ ರೀತಿ, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಕಿಟ್ಗಳು ಹಾಗೂ ಅಗತ್ಯ ಶೈಕ್ಷಣಿಕ ಮತ್ತು ವಸತಿ ಸಾಮಗ್ರಿಗಳನ್ನು ಅರ್ಹ ಎಲ್ಲ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಹಾಗೂ ಪಾರದರ್ಶಕವಾಗಿ ವಿತರಿಸಬೇಕು. ಕಿಟ್ಗಳ ವಿತರಣೆಯಲ್ಲಿ ವಿಳಂಬ, ಕೊರತೆ ಅಥವಾ ತಾರತಮ್ಯ ಕಂಡುಬಂದಲ್ಲಿ ಪರೀಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ವಾತಾವರಣ ಕಲ್ಪಿಸುವುದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದ್ದು, ವಸತಿ ನಿಲಯಗಳ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಕುಂದುಕೊರತೆಗಳನ್ನು ಆಲಿಸಲು ನಿಯಮಿತವಾಗಿ ಪರೀಶೀಲನಾ ಸಭೆಗಳನ್ನು ನಡೆಸಬೇಕು ಹಾಗೂ ವಸತಿ ನಿಲಯಗಳ ಸ್ಥಿತಿಗತಿಗಳ ಕುರಿತು ನಿರಂತರ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ವಿಜಯಪುರ ಜಿಲ್ಲೆಯ ಎಲ್ಲ ಮೆಟ್ರಿಕ್ ನಂತರದ ವಸತಿ ನಿಲಯಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.