ಭಾರತ ಶ್ರೇಷ್ಠ ಗುರು ಪರಂಪರೆ ಹೊಂದಿದ ದೇಶ: ದಮ್ಮೂರಮಠ
ತಾಳಿಕೋಟಿ 03 : ಈ ಜಗತ್ತಿಗೆ ಗುರುವಿನ ಸ್ಥಾನಮಾನ ಹಾಗೂ ಶ್ರೇಷ್ಠತೆಯನ್ನು ಪರಿಚಯಿಸಿದ ದೇಶ ಭಾರತ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ ಎಂದು ಸಾಹಿತಿ, ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರಿ್ಬ. ದಮ್ಮೂರಮಠ ಹೇಳಿದರು. ಗುರುವಾರ ಸಂಜೆ ಪಟ್ಟಣದ ಪ್ರತಿಷ್ಠಿತ ವಿವಿ ಸಂಘದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡ "ದೀಪದಾನ" ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕ ಕೇವಲ ವಿದ್ಯಾರ್ಥಿಗಳಿಗೆ ಓದು ಬರಹ ಕಲಿಸುವುದಿಲ್ಲ ಅವನ ಜೀವನದ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶನವನ್ನು ಮಾಡುತ್ತಾನೆ. ಈ ಶಿಕ್ಷಣ ಸಂಸ್ಥೆಯಲ್ಲಿ ನಿಮಗೆ ಶಿಕ್ಷಣದ ಜೊತೆ ಉನ್ನತ ಮೌಲ್ಯಗಳನ್ನೂ ತಿಳಿಸಿಕೊಡಲಾಗಿದೆ ಅವುಗಳನ್ನು ಜೀವನದ ಉದ್ದಕ್ಕೂ ಪಾಲಿಸಿ, ನಿಮ್ಮ ಪ್ರಯತ್ನ ಕೇವಲ ಒಂದು ಹುದ್ದೆಯನ್ನು ಪಡೆಯಲು ಮಾತ್ರ ಆಗದಿರಲಿ, ಜೀವನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡುವ ಗುರಿಯನ್ನು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಆರ್. ಎಂ.ಬಂಟನೂರ ಅವರು ವಿದ್ಯಾರ್ಥಿಗಳೊಂದಿಗೆ ಕಳೆದ ಎರಡು ವರ್ಷಗಳ ಅನುಭವಗಳನ್ನು ಹಚ್ಚಿಕೊಂಡು ಭಾವುಕರಾದರು. ವೇದಿಕೆಯಲ್ಲಿ ಸಂಘದ ಸದಸ್ಯರಾದ ಬಿ. ಎನ್.ಹಿಪ್ಪರಗಿ, ಕಾಶಿನಾಥ್ ಎಸ್.ಮುರಾಳ, ಎಂ.ಆರ್. ಕತ್ತಿ, ಸಿ. ಆರ್.ಕತ್ತಿ, ಆರ್. ಎಂ. ಸಾಲಂಕಿ, ಬಿ. ಎಂ. ಗುರಡ್ಡಿ, ಎಸ್.ಎಸ್.ಸರೂರ, ಅಶೋಕ ಜಾಲವಾದಿ ವಿ. ಬಿ.ಗಬಸಾವಳಗಿ, ವಿದ್ಯಾರ್ಥಿ ಒಕ್ಕೂಟದ ಪ್ರ.ಕಾ. ಶಿವರಾಜ ಉಪ್ಪಾರ, ಪಾರ್ವತಿ ಕಟ್ಟಿಮನಿ, ಯಮನಪ್ಪ ತಾಳಿಕೋಟಿ, ಮಧು ನಾಡಗೌಡ ಇದ್ದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಶಿವಲೀಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ವಾಯ್ ಎಚ್ ಅಂಗಡಗೇರಿ ಸ್ವಾಗತಿಸಿದರು. ಸುರೇಶ ಬಡಿಗೇರ ಪರಿಚಯಿಸಿದರು. ಐಕ್ಯೂ ಎಸಿ ಸಂಯೋಜಕ ಯು. ಎನ್. ಮಂಗೊಂಡ ನಿರೂಪಿಸಿದರು.