ತಾಳಿಕೋಟಿ

ಖಾಸ್ಗತ ಮಠದಲ್ಲಿ ಶಿವಯೋಗಿಗಳ ಪುಣ್ಯಸ್ಮರಣೋತ್ಸವ

ಖಾಸ್ಗತ ಮಠದಲ್ಲಿ ಶಿವಯೋಗಿಗಳ ಪುಣ್ಯಸ್ಮರಣೋತ್ಸವ


ತಾಳಿಕೋಟೆ, ಅ.3: ಮಹಾತ್ಮರು ಹಾಗೂ ಸಂತರ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ. ನಾಡನ್ನು ಪುಣ್ಯಕ್ಷೇತ್ರವನ್ನಾಗಿಸಿದವರಲ್ಲಿ ಖಾಸ್ಗತ-ವಿರಕ್ತ ಸ್ವಾಮೀಜಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಕೊಡೇಕಲ್ಲ ದುರುದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.  

ಪಟ್ಟಣದ ಖಾಸ್ಗತೇಶ್ವರ ಮಠದ ಗುರು ಭಿಕ್ಷೇಶ್ವರ ಸಭಾಮಂಟಪದಲ್ಲಿ ಗುರುವಾರ ನಡೆದ ಖಾಸ್ಗತ ಶಿವಯೋಗಿಗಳ 130ನೇ ಹಾಗೂ ವಿರಕ್ತ ಸ್ವಾಮೀಜಿಯವರ 12ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಶಿವ ಬಸವ ಸ್ವಾಮೀಜಿಗಳು ಸಂಗೀತದ ಸಂಕಲ್ಪವನ್ನು ಸಾಕಾರಗೊಳಿಸುವುದರೊಂದಿಗೆ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಿದರು. ಸಿದ್ಧಗಂಗಾ ಮಠ, ಗವಿಮಠಗಳ ನಂತರ ಖಾಸ್ಗತ ಮಠವೂ ಸಾಧನೆಯ ಶಿಖರ ತಲುಪಿದೆ ಎಂದು ಹೇಳಿದರು.  

ವಿರಕ್ತ ಶ್ರೀ ಪ್ರಶಸ್ತಿ ಪ್ರದಾನ : ಬಲಾ ವಾದಕ ಶಿವಾನಂದ ಹೂಗಾರ ಇವಣಗಿ, ಗಾಯಕರಾದ ಸುಭಾಷ ದಾಸರ ಮುಧೇಬಿಹಾಳ, ಸರೋಜನಿ ಮಾಡಬಾಳ ನಿಡಗುಂದಿ, ಗುಂಡಣ ಸಿದ್ದಪ್ಪ ತಾಳಿಕೋಟೆ, ನಿವೃತ್ತ ಮುಖ್ಯಶಿಕ್ಷಕ ಪರಶುರಾಮ ಭೀಮಪ್ಪ ಗುಬ್ಬೇವಾಡ ಹಾಗೂ ಸಂಗೀತ ಶಿಕ್ಷಕ ಲಕ್ಷ್ಮಣಸಿಂಗ್ ಅಣ್ಣೂಸಿಂಗ್ ವಿಜಯಪುರ ತಾಲ್ಲೂಕು ತಾಳಿಕೋಟೆ ಅವರಿಗೆ ‘ವಿರಕ್ತ ಶ್ರೀ’ ಪ್ರಸ್ತಿ ನೀಡಿ ಗೌರವಿಸಲಾಯಿತು.  

ಇದೇ ಸಂದರ್ಭದಲ್ಲಿ ಕರ್ನಾಟಕ ಸೌಂಡ್ ಸಿಸ್ಟಂನ ಮಹಮ್ಮದ್ ಹರ್ಷದ್ ಅತ್ತಾರ್ ಹಾಗೂ ಎಸ್‌.ಕೆ. ಸ್ಟುಡಿಯೊ ಛಾಯಾಗ್ರಾಹಕ ರಾಜು ಅಲ್ಲಾಪುರ ಅವರನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು.  

ಸಂಗೀತ ಸಂಜೆ : ರಾತ್ರಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಹಿರೇಮಠ ಕೋಟಡಗಿಯ ಪ್ರವಚನಕಾರ ವೇ.ಮೂ. ರಾಚಯ್ಯ ಶಾಸ್ತ್ರಿ ಸಾನಿಧ್ಯ ವಹಿಸಿದ್ದರು. ನಿವೃತ್ತ ಸಂಗೀತ ಶಿಕ್ಷಕ ಪಂಡಿತ ಮಲ್ಲಿಕಾರ್ಜುನ ಭಜಂತ್ರಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿದರು.  

ಮುಖ್ಯ ಅತಿಥಿಗಳಾಗಿ ಕಂಭಾವಿ ಸಂಗೀತ ಶಿಕ್ಷಕ ಪಂಡಿತ ಬಸವರಾಜ ಭಂಟನೂರ, ನಿವೃತ್ತ ಶಿಕ್ಷಣಾಧಿಕಾರಿ ಕಾಶೀನಾಥ ಪಿ. ಸಾಲಿಮಠ ಮತ್ತಿತರರು ಭಾಗವಹಿಸಿದ್ದರು. ಖಾಸ್ಗತ ಮಠದಲ್ಲಿ ತೆರೆಯಲಾಗಿರುವ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಗೀತ ಸುಧೆ ಉಣಬಡಿಸುವ ಕೆಲಸ ನಡೆಯುತ್ತಿದೆ ಎಂದು ಪಿ. ಸಾಲಿಮಠ ಹೇಳಿದರು. ಸಂಗೀತ ಶಿಕ್ಷಕ ಈಶ್ವರ ಬಡಿಗೇರ (ಬಸಾಲವಾಡಗಿ) ಹುಣಸಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ