ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ: ಮಹೇಶ ಪೋತದಾರ
ತಾಳಿಕೋಟಿ 01 : ವಿದ್ಯಾರ್ಥಿಗಳು ಜೀವನದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ಕಠಿಣ ಪರಿಶ್ರಮದ ಮೂಲಕ ಶ್ರೇಷ್ಠ ಸಾಧನೆ ಮಾಡಬೇಕು. ತಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಹೆತ್ತವರಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ನಗರದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಬಿ.ಇಡಿ.) ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವ್ಯಕ್ತಿಯ ಸರ್ವಾಂಗೀಣ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಣ ನೀಡುವ ಮಹತ್ವದ ಕಾರ್ಯಕ್ಕೆ ವಿದ್ಯಾರ್ಥಿಗಳು ಸಿದ್ಧರಾಗುತ್ತಿದ್ದಾರೆ. ಶಿಕ್ಷಕ ಸಮಾಜವೆಂಬ ಕಟ್ಟಡಕ್ಕೆ ಭದ್ರ ಬುನಾದಿ ಹಾಕುವ ಕಾರ್ಯ ಮಾಡುತ್ತಾನೆ. ಬುನಾದಿ ದುರ್ಬಲವಾಗಿದ್ದರೆ ಕಟ್ಟಡ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ಬಿ.ಇಡಿ. ವಿದ್ಯಾರ್ಥಿಗಳು ಉತ್ತಮ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಯು.ಎನ್. ಮಂಗೊಂಡ ವಾರ್ಷಿಕ ವರದಿ ವಾಚಿಸಿದರು. ಸುರೇಶ ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಉಪನಿರ್ದೇಶಕ ಮಹೇಶ ಪೋತದಾರ ಹಾಗೂ ತಾಲೂಕು ಸಹಾಯಕ ನಿರ್ದೇಶಕಿ ಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವರಾಜ ಗೋಪಾಲಯ್ಯ ಪ್ರಾರ್ಥಿಸಿದರು. ಉಪನ್ಯಾಸಕ ಗಂಗನಗೌಡರ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಯು.ಎನ್. ಮಂಗೊಂಡ ನಿರೂಪಿಸಿ ವಂದಿಸಿದರು.