ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ
ತಾಳಿಕೋಟಿ 25: ಸಂಘದಿಂದ ಸಾಲ ಪಡೆದ ರೈತರು ಅದನ್ನು ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು. ಇದು ಸಂಘದ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ ಎಂದು ಅಸ್ಕಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಚೌದ್ರಿ ಹೇಳಿದರು. ಅಸ್ಕಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 66ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ಮರುಪಾವತಿ ಮಾಡದ ಸಾಲಗಾರರ ಪಟ್ಟಿ ದೊಡ್ಡದಿದ್ದು, ಡಿಸಿಸಿ ಬ್ಯಾಂಕ್ ಸೂಚನೆಯಂತೆ ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ. ಬಾಕಿ ಸಾಲಗಾರರು ಶೀಘ್ರವೇ ಸಾಲ ಮರುಪಾವತಿಸಬೇಕು ಎಂದು ಮನವಿ ಮಾಡಿದರು. ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಇದಕ್ಕೆ ಸದಸ್ಯರ ಸಹಕಾರವೇ ಕಾರಣವಾಗಿದೆ. ಮುಂದೆಯೂ ಇದೇ ಸಹಕಾರ ಮುಂದುವರಿಯಬೇಕು ಎಂದರು.
ಆಡಳಿತ ಮಂಡಳಿ ನಿರ್ದೇಶಕ ಎಚ್.ಎನ್. ಬಿರಾದಾರ ಮಾತನಾಡಿ, ಸಂಘದ ಅಭಿವೃದ್ಧಿಯಲ್ಲಿ ಷೇರು ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಸದಸ್ಯರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವುದರ ಜೊತೆಗೆ ತಮ್ಮ ಠೇವಣಿಗಳನ್ನು ಸಂಘದಲ್ಲಿಯೇ ಇಡಲು ಮುಂದಾಗಬೇಕು. ಇದರಿಂದ ಸಂಘದ ಸಾಲ ನೀಡುವ ಸಾಮರ್ಥ್ಯ ಹೆಚ್ಚಿ ಆರ್ಥಿಕವಾಗಿ ಸದೃಢವಾಗಲಿದೆ ಎಂದರು.
ರೈತರಿಗೆ ಸಕಾಲಕ್ಕೆ ಗೊಬ್ಬರ ವಿತರಿಸುವ ಕಾರ್ಯವನ್ನು ಇನ್ನೆರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು. ಕಿರಿಯ ಸಹಾಯಕ ಪ್ರಶಾಂತ ಚೌದ್ರಿ ವಾರ್ಷಿಕ ವರದಿ ಮಂಡಿಸಿ, ಪ್ರಸಕ್ತ ವರ್ಷ ಸಂಘದಲ್ಲಿ 1,790 ಷೇರು ಸದಸ್ಯರಿದ್ದು, 1.13 ಕೋಟಿ ಷೇರು ಬಂಡವಾಳ ಹಾಗೂ 5.54 ಲಕ್ಷ ಠೇವಣಿ ಇದೆ.
ರೈತರಿಗೆ ಸುಮಾರು 8.96 ಕೋಟಿ ಸಾಲ ವಿತರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಂಘವು 2.43 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕ್ರ್ಪ ಕೆಳಗಿನಮನಿ, ಮಾಜಿ ಗ್ರಾಪಂ ಅಧ್ಯಕ್ಷ ರಾಯನಗೌಡ ಪಾಟೀಲ ಸಂಗಾರೆಡ್ಡಿ ನಾಗರೆಡ್ಡಿ, ಕಾಶಿನಾಥ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಂಘದ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.