ಬರ ಘೋಷಣೆಯಿಂದ ರಾಜಕಾರಣಿಗಳಿಗೆ ಉತ್ತರ: ಮದರಕಲ್ಲ
ತಾಳಿಕೋಟಿ 23: ಬರಗಾಲದಿಂದ ತತ್ತರಿಸಿರುವ ರೈತರ ಭಾವನೆಗಳ ಮೇಲೆ ರಾಜಕಾರಣ ಮಾಡುವವರಿಗೆ ತಾಳಿಕೋಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ತಕ್ಕ ಉತ್ತರ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್ಲ ಹೇಳಿದರು. ಮಂಗಳವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಜನರು ಗಮನಿಸಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದವರು ಇದೀಗ ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಬರಪೀಡಿತ ಪ್ರದೇಶ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿದ್ದು, ಈ ವಿಷಯ ತಿಳಿದಿದ್ದರೂ ರಾಜಕೀಯ ಉದ್ದೇಶದಿಂದ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು. ಮತಕ್ಷೇತ್ರದ ಜನರು ಸತ್ಯಾಸತ್ಯತೆ ಅರಿಯುವಷ್ಟು ಪ್ರಬುದ್ಧರಾಗಿದ್ದು, ಸುಳ್ಳು ಆರೋಪಗಳನ್ನು ನಂಬುವುದಿಲ್ಲ ಎಂದರು.
ಶಾಸಕರ ಕುರಿತು ಹಗುರವಾಗಿ ಮಾತನಾಡುವುದು ಸೂಕ್ತವಲ್ಲ. ವಿರೋಧ ಪಕ್ಷದ ಮಾಜಿ ಶಾಸಕರಾಗಿ ಶಾಸಕರ ಕಾರ್ಯಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಅವರ ಹಕ್ಕಾಗಿದ್ದರೂ, ವೈಯಕ್ತಿಕವಾಗಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಶಾಸಕರು ಈಗಾಗಲೇ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಮ್ಮ ನಾಯಕರು ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆಯೇ ಹೊರತು ಕುತಂತ್ರದ ರಾಜಕಾರಣಕ್ಕೆ ಮುಂದಾಗುವುದಿಲ್ಲ ಎಂದು ಮದರಕಲ್ಲ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ ಮಾತನಾಡಿ, ತಾಳಿಕೋಟಿ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ಘೋಷಿಸಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಾಸಕ ನಾಡಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಿ.ಎನ್. ಹಿಪ್ಪರಗಿ, ಸಿ.ಎಸ್. ಮಾಳಿ ಹಾಗೂ ಸಂಗನಗೌಡ ಅಸ್ಕಿ ಉಪಸ್ಥಿತರಿದ್ದರು.