ಬ್ಯಾಡ್ಗಿ

ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಪುರಸಭೆ

ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಪುರಸಭೆ

ಬ್ಯಾಡಗಿ 26: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಬಸನಕಟ್ಟೆ ಕೆರೆಯಲ್ಲಿ ಗಿಡಕಂಟೆಗಳು ಬೆಳೆದು ಅದರ ಗಲೀಜು ಹಾಗೂ ದುರ್ವಾಸನೆಯಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ಪುರಸಭೆಯು ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕ ಹಾಗೂ ಪರಿಸರ ಸ್ನೇಹಿ ಬಳಗದವರು ಬಸನಕಟ್ಟೆ ಕೆರೆಯ ಪರಿಸರದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ಶಾಸಕರಿಗೆ, ಜಿಲ್ಲಾಡಳಿತ ಹಾಗೂ ಪುರಸಭೆಯ ಗಮನಕ್ಕೆ ತಂದಿದ್ದರೂ ಅನುದಾನದ ಕೊರತೆಯಿಂದ ಕೆರೆಯ ಸುಧಾರಣೆಗೆ ಹಿನ್ನಡೆ ಉಂಟಾಗಿತ್ತು,

ಆದರೆ ನ್ಯಾಸ್ ಘಟಕದ ರಾಜ್ಯ ಸಂಚಾಲಕ ಹಾಗೂ ಪರಿಸರ ಪ್ರೇಮಿ ಮಲ್ಲೇಶಪ್ಪ ಚಿಕ್ಕಣ್ಣನವರ ಕೆರೆಯ ಸುಧಾರಣೆಗೆ ಮತ್ತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು.ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ಅವರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಅನುದಾನದ ಲಭ್ಯತೆಯ ನಂತರ ಕೆರೆಯ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಮುಂದಾಗುವಂತೆ ಸೂಚಿಸಿದ್ದು, ಸದ್ಯಕ್ಕೆ ತಾತ್ಕಾಲಿಕವಾಗಿ ಕೆರೆಯಲ್ಲಿ ಬೆಳೆದಿರುವ ಗಿಡ ಕಂಟೆಗಳ ಹಾಗೂ ಕೊಳೆಯನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದು, ಅದರಂತೆ ಪುರಸಭೆಯು ಕಾರ್ಯೋನ್ಮುಖವಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಪುರಸಭಾ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಅವರು, ಬಸನಕಟ್ಟೆ ಕೆರೆಯ ನೀರು ಬಸಿಯದಂತೆ ತಡೆಗೋಡೆ ನಿರ್ಮಿಸಲು 25ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇನ್ನುವರೆಗೂ ಅನುದಾನದ ಮಂಜೂರಾತಿ ದೊರಕಿಲ್ಲ. ಅನುದಾನ ಬಂದ ಕೂಡಲೇ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರಲ್ಲದೇ ಸದ್ಯಕ್ಕೆ ಕೆರೆಯ ಸ್ವಚ್ಛತೆಗೆ ಕ್ರಮ ವಹಿಸಿದ್ದು, ಕೆರೆಯ ಸಮಗ್ರ ಅಭಿವೃದ್ಧಿಗೆ ಮುಂದಿನ ಹಂತಗಳಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ತಿಳಿಸಿದರು.

ಸುದ್ದಿ ಓದಿ