ಧರ್ಮದ ಅಭಿಮಾನಕ್ಕಿಂತ ದೇಶದ ಅಭಿಮಾನ ಮುಖ್ಯ: ಡಾ.ಚನ್ನಸಿದ್ದರಾಮ ಶ್ರೀ
ತಾಳಿಕೋಟೆ27: ದೇಶ ರಕ್ಷಣೆಗೆ ಪ್ರಸಂಗ ಬಂದರೆ ಸನ್ಯಾಸಿಗಳು ಸಹ ಸೈನಿಕರಾಗಿ ಹೋರಾಟ ಮಾಡಲು ಸಿದ್ದ. ದೇಶ ಉಳಿದರೆ ಮಾತ್ರ ಸನ್ಯಾಸ, ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಧರ್ಮದ ಅಭಿಮಾನಕ್ಕಿಂತ ದೇಶದ ಅಭಿಮಾನ ಮುಖ್ಯ ಎಂದು ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಯಡಿಯೂರದಿಂದ ಶ್ರೀಶೈಲದವರೆಗೆ ನಡೆಯಲಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶ ಉಳಿದರೆ ದೇಹ ಉಳಿಯುತ್ತದೆ. ಧರ್ಮ ಉಳಿದರೆ ಧನ ಉಳಿಯುತ್ತದೆ. ದೇಶ ಮತ್ತು ಧರ್ಮಗಳ ಮೇಲೆ ಅಭಿಮಾನವನ್ನು ಬೆಳೇಸಿಕೊಳ್ಳಬೇಕು. ದೇಶ ಮತ್ತು ಧರ್ಮ ಎರಡು ಭಾರತೀಯನ ಪ್ರಮುಖ ಅಂಗಗಳಾಗಬೇಕು. ದೇಹಾಭಿಮಾನಕ್ಕಿಂತ ದೇಶಾಭಿಮಾನ ಹೆಚ್ಚಬೇಕು. ಧನಾಬಿಮಾನಕ್ಕಿಂತ ಧರ್ಮಾಭಿಮಾನ ದೊಡ್ಡದು. ಪಂಚಪೀಠಗಳ ಪೀಠಾಧೀಶರು ಕೇವಲ ಅಡ್ಡ ಪಲ್ಲಕ್ಕಿ ಮೇಲೆ ಸಂಚಾರ ಮಾಡುತ್ತಾರೆ ಎನ್ನುವ ಆರೋಪ ಇದೆ. ಪಂಚಪೀಠಗಳು ಪ್ರಸಂಗ ಬಂದರೆ ಧರ್ಮ ಉಳಿಸಲು, ಸಮಾಜ ಉಳಿಸಲು, ಭಕ್ತಿಯನ್ನು ಬಿತ್ತಲು ಪಾದಯಾತ್ರೆಯನ್ನು ಮಾಡಲು ಸಹ ಸಿದ್ದ ಎನ್ನುವದನ್ನು ತಿಳಿಸಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯ ಉದ್ದಕ್ಕೂ ಧಾರ್ಮಿಕ ಕಾರ್ಯಗಳು, ಪಾದಯಾತ್ರೆ ಉದ್ದಕ್ಕೂ ಎರಡು ರಸ್ತೆಗಳ ಬದಿ ಸಸಿ ನೆಡುವ ಕಾರ್ಯ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಬಿಸಲಿನ ಹೊತ್ತಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ನೆರಳು ಸಿಗಲಿ ಎನ್ನುವ ಸದಾಶಯ ಇದೆ. ಯುವ ಜನತೆಯನ್ನು ದುಶ್ಚಟಗಳಿಗೆ ದಾಸರಾಗಿದ್ದಾರೆ. ಅಂತಹ ದುಶ್ಚಟಳನ್ನು ಸನ್ಯಾಸಿಗಳ ಜೋಳಿಗೆಗೆ ಹಾಕಿಸುವ ಮೂಲಕ ದುಶ್ಚಟಗಳ ಬಿಡಿಸುವ ಕಾರ್ಯ ಮಾಡಲಾಗುತ್ತದೆ. ಲಿಂಗ ಧಾರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ನಾನು ಪಾದಯಾತ್ರೆ ಮಾಡುವ ಮೂಲಕ ಭಕ್ತರು ನಡೆಸುವ ಪಾದಯಾತ್ರೆಯಲ್ಲಿ ಆಗುವ ತೊಂದರೆಗಳನ್ನು ಮನಗಂಡು ಅವುಗಳನ್ನು ಬಗೆಹರಿಸುವ ಕಾರ್ಯ ಆಗಲಿದೆ. ಶ್ರೀಶೈಲಕ್ಕೆ ಪಾದಯಾತ್ರೆ ತಲುಪಿದ ನಂತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅಲ್ಲಿ ವೀರಶೈವರ ನಾಡಹಬ್ಬದಂತಹ ಕಾರ್ಯಕ್ರಮ ನಡೆಯಲಿದೆ ಎಂದರು.
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಹಿರೂರ ಅನ್ನದಾನೇಶ್ವರ ಮಠದ ಗುರುಜಯಸಿದ್ದೇಶ್ವರ ಶಿವಾಚಾರ್ಯರು, ಜೈನಾಪೂರದ ರೇಣುಕಾ ಶಿವಚಾರ್ಯರು, ಗುಂಡಕನಾಳದ ಗುರಲಿಂಗ ಶಿವಾಚಾರ್ಯರು, ಕರಬಂಠನಾಳದ ಶಿವಕುಮಾಕುಮಾರ ಸ್ವಾಮಿಗಳು ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಬಿಜೆಎನ್ಎಲ್ ವತಿಯಿಂದ ಹಮ್ಮಿಕೊಂಡ 2500 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯರು, ಚಬನೂರದ ರಾಮಲಿಂಗ ಸ್ವಾಮಿಗಳು, ವೇ.ವಸಂತಭಟ್ ಜೋಶಿ, ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ಮುರಗೇಶ ವೀರಕ್ತಮಠ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ವೀರಶೈವ ಸಮಾಜದ ಅಧ್ಯಕ್ಷ ಜಿ.ಎಸ್.ಕಶೇಟ್ಟಿ, ವಿವಿ ಸಂಘದ ಕಾರ್ಯದರ್ಶಿ ಬಿ.ಎಸ್.ಗಬಸಾವಳಗಿ, ಎಸ್ಎಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್ಪಾಟೀಲ ಕೂಚಬಾಳ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ, ಸಿದ್ದನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಶಿವು ದೇಸಾಯಿ, ಕಾಶಿಬಾಯಿ ರಾಂಪೂರ ಸೇರಿದಂತೆ ಇತರರು ಇದ್ದರು.
ಶ್ರೀಶೈಲ ಪೀಠದ ಸಾಧಕರಿಂದ ವೇದಘೋಷ್ಯ ನಡೆಯಿತು. ಉಪನ್ಯಾಸಕ ಸೋಮಶೇಖರಯ್ಯ ಹಿರೇಮಠ ಪ್ರಾರ್ಥಿಸಿದರು. ಮಹಾಂತೇಶ ಮುರಾಳ, ಸುಮಂಗಲಾ ಕೋಳೂರ ನಿರೂಪಿಸಿದರು.