ಧಾರಾಕಾರ ಮಳೆ: ಮನೆ ಕುಸಿತ
ಬ್ಯಾಡಗಿ 19: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಆಗಸನಹಳ್ಳಿಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಮಹದೇವಪ್ಪ ನಾಗಪ್ಪ ಪೂಜಾರ ಎನ್ನುವವರಿಗೆ ಸೇರಿದ ಮನೆಯೂ ಆರಂಭದಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದಲ್ಲಿ ಕುಸಿದು ಬಿದ್ದಿತ್ತು. ಒಂದೆರೆಡು ದಿನ ಕಳೆಯುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯು ಕುಸಿದು ಬಿದ್ದ ಸಂದರ್ಭದಲ್ಲಿ ಎಲ್ಲರೂ ಹೊರಗಡೆ ಕೆಲಸಕ್ಕಾಗಿ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ತಿಳಿದು ಬಂದಿದೆ.ಕಳೆದ ಒಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಬಹಳಷ್ಟು ಮನೆಗಳು ಕುಸಿದು ಬಿದ್ದಿದ್ದು ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸತತ ಮಳೆಯಿಂದ ಜನ ಜೀವನವೂ ಬಹಳಷ್ಟು ಅಸ್ತವ್ಯಸ್ತಗೊಂಡಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ.