ಕಾರವಾರ

ಜನತಾ ಪ್ಲಾಟ್‌ಗಳ ಹಕ್ಕುಪತ್ರ ವಿತರಣೆಗೆ ಸರ್ಕಾರ ಪ್ರಯತ್ನ ನಡೆಸುತ್ತಿದೆ - ಶಾಸಕಿ ರೂಪಾಲಿ ನಾಯ್ಕ

ಜನತಾ ಪ್ಲಾಟ್‌ಗಳ ಹಕ್ಕುಪತ್ರ ವಿತರಣೆಗೆ ಸರ್ಕಾರ ಪ್ರಯತ್ನ ನಡೆಸುತ್ತಿದೆ - ಶಾಸಕಿ ರೂಪಾಲಿ ನಾಯ್ಕ

ಕಾರವಾರ 17: ಉತ್ತರಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪ್ಲಾಟ್‌ಗಳ ಹಕ್ಕುಪತ್ರ ವಿತರಣೆಗೆ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಶಾಸಕಿ ರೂಪಾಲಿ ಎಸ್‌. ನಾಯ್ಕ ಅವರು ಹೇಳಿದರು. 

ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಜನತಾ ಪ್ಲಾಟ್‌ಗಳ ಹಕ್ಕು ಪತ್ರದ ಸಮಸ್ಯೆಗಳ ಕುರಿತು ಸಭೆಯಲ್ಲಿ ಅವರು ಮಾತನಾಡಿದರು. 

ಅತಿ ಹೆಚ್ಚು ಪ್ರಕರಣಗಳು ಹಕ್ಕು ವಿತರಣೆಯಾಗದೆ ರಾಜ್ಯದಲ್ಲಿ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಉಳಿದಿವೆ. ಅವುಗಳನ್ನು ಇತ್ಯರ್ಥ ಗೊಳಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದರು.  

ಹಲವಾರು ವರ್ಷಗಳ ಹಿಂದೆ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದೆ. ಎರಡು-ಮೂರು ತಲೆ ಮಾರುಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಹಕ್ಕುಪತ್ರವಿದ್ದರು ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಯೋಜನೆಯ ಲಾಭ ಸಿಗದೆ ಜನರು ಪರದಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಸರಿಯಾದ ದಾಖಲಾತಿ ಮಾಡಿಕೊಡಬೇಕಾಗಿದೆ ಎಂದರು. 

ಕ್ಷೇತ್ರದ ವ್ಯಾಪ್ತಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಕ್ಕು ಪತ್ರ ಇಲ್ಲದವರ ಮಾಹಿತಿಯನ್ನು ಸಂಗ್ರಹಿಸಬೇಕು. ಅಲ್ಲದೇ, ತಾಲ್ಲೂಕುಗಳಲ್ಲಿ ಕೆಲವು ಪ್ರಕರಣಗಳು ದೃಢೀಕರಣಕ್ಕಾಗಿ ಹಾಗೆ ಉಳಿದಿದೆ. ಅವುಗಳನ್ನು ತ್ವರಿತವಾಗಿ ಬಗೆ ಹರಿಸಲು ತಹಶೀಲ್ದಾರರು ಕ್ರಮಕೈಗೊಳ್ಳಬೇಕು. 

ಜನತಾ ಪ್ಲಾಟ್ ಫಲಾನುಭವಿಗಳ ಜಾಗ ಡಿಸ್‌ಫಾರೆಸ್ಟ್‌ ಆಗದಿದ್ದಲ್ಲಿ ಅರಣ್ಯ ಇಲಾಖೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕು. ಗಡಿಗಳನ್ನು ಸರಿಪಡಿಸಿ ಕಾಲೋನಿಯ ನಕ್ಷೆಯನ್ನ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ ತಯಾರಿಸಿ ನೀಡಬೇಕು. ತಾಲ್ಲೂಕು ಪಂಚಾಯತ ಇಒ ಮತ್ತು ತಹಶೀಲ್ದಾರರು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು  ಸೂಚಿಸಿದರು. 

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೂ ಮಲೆನಾಡು ಮತ್ತು ಕರಾವಳಿ ಪ್ರದೇಶವಾಗಿರುವುದರಿಂದ ಹಲವಾರು ರಸ್ತೆಗಳು ಅರಣ್ಯ ಅತಿಕ್ರಮಣದಲ್ಲಿ ಬರುತ್ತದೆ.  ಅವುಗಳನ್ನು ಸಕ್ರಮಗೊಳಿಸಲು ಕ್ರಮವಹಿಸಬೇಕು. ಇದರಿಂದ ಜನರಿಗೆ ಮೂಲಸೌಲಭ್ಯ ಲಭಿಸುವಂತಾಗುತ್ತದೆ. ಮೊದಲಿನಿಂದಲು ಅರಣ್ಯದಲ್ಲಿರುವ ರಸ್ತೆಗಳಿಗೆ ಅಡ್ಡಿ ಪಡಿಸಬಾರದು ಎಂದು ಎಸಿಎಫ್‌ಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಕಾರವಾರ ಮತ್ತು ಅಂಕೋಲಾ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದಕುಮಾರ, ಪಿ.ಸಾವಂತ, ಎಸಿಎಫ್ ಮಂಜುನಾಥ ನಾವಿ ಉಪಸ್ಥಿತರಿದ್ದರು. 


ಸುದ್ದಿ ಓದಿ