ತಾಳಿಕೋಟಿ

ಮಾದರಿ ಕೈಲಾಸ ಧಾಮ ನಿರ್ಮಾಣ: ಎ.ಎಸ್‌.ಪಾಟೀಲ ನಡಹಳ್ಳಿ

ಮಾದರಿ ಕೈಲಾಸ ಧಾಮ ನಿರ್ಮಾಣ: ಎ.ಎಸ್‌.ಪಾಟೀಲ ನಡಹಳ್ಳಿ

ವೀರಶೈವ ಲಿಂಗಾಯತ ರುದ್ರಭೂಮಿ ಅಭಿವೃದ್ಧಿ ಅಡಿಗಲ್ಲು 

ತಾಳಿಕೋಟೆ 08: ಪಟ್ಟಣದಲ್ಲಿ ವೀರಶೈವ ಕೈಲಾಸಧಾಮ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ರೂ.10 ಲಕ್ಷ ನೀಡುವುದಲ್ಲದೇ ಪುರಸಭೆಯಲ್ಲಿ ಲಭ್ಯವಾಗುವ ಹೆಚ್ಚುವರಿ ಅನುದಾನವನ್ನು ಒದಗಿಸಿ ಒಂದು ಮಾದರಿಯಾದ ಸುಂದರವಾದ ಕೈಲಾಸಧಾಮ ನಿರ್ಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು. 

ಅವರು ಪಟ್ಟಣದ ಖಾಸ್ಗತೇಶ್ವರ ಮಠ, ವೀರಶೈವ ಲಿಂಗಾಯತ ಕೈಲಾಸಧಾಮ ಟ್ರಸ್ಟ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ವೀರಶೈವ ಲಿಂಗಾಯತ ರುದ್ರಭೂಮಿ ಅಭಿವೃದ್ಧಿ ಅಡಿಗಲ್ಲು ಸಮಾರಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಶನಿವಾರ ಮಾತನಾಡಿದರು. 

ಕೈಲಾಸ ಧಾಮ ಅಭಿವೃದ್ಧಿಗಾಗಿ ರೂ.ಎರಡು ಕೋಟಿ ಹಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕರು ಹಾಗೂ ಸರ್ಕಾರ ಜೊತೆಯಾಗಿ ಕೈಜೋಡಿಸಬೇಕು. ತಾಳಿಕೋಟೆ ಪಟ್ಟಣ ಕಳೆದ ನಾಲ್ಕೈದು ವರ್ಷಗಳಿಂದ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿರುವುದು ಸಂತಸ ತಂದಿದೆ. ಪಟ್ಟಣದ ಅಭಿವೃದ್ಧಿಗೆ ಖಾಸ್ಗತೇಶ್ವರಮಠದ ಶ್ರೀಗಳು ಚಾಲಕನ ಸ್ಥಾನ ವಹಸಿಬೇಕು ನಾನೂ ಅವರ ಜೊತೆಗೆ ಇರುತ್ತೇನೆ. ತಾಳಿಕೋಟೆ ಪಟ್ಟಣದ ಬಹುತೇಕ ಜಮೀನುಗಳು ನೀರಾವರಿಯಿಂದ ವಂಚಿತವಾಗುತ್ತಿವೆ. ಈ ಬಗ್ಗೆ ನಾನು ದೇವರ ಹಿಪ್ಪರಗಿ ಶಾಸಕನಾಗಿದ್ದಾಗ ಈ ಬಗ್ಗೆ ಹೋರಾಟ ಮಾಡಿದಾಗ ಅದರ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಇಂದು ಪತ್ರಿಕಾಗೋಷ್ಠಿ ಮಾಡಿ ನಮ್ಮ ಸಾದನೆ ಎಂದು ಹೇಳುತ್ತಿರುವದು ಅಪಹಾಸ್ಯಕ್ಕೆ ಈಡಾಗುತ್ತಿದೆ ಎಂದರು. 

ಸಾನಿಧ್ಯ ವಹಿಸಿದ್ದ ಖಾಸತೇಶ್ವರ ಮಠದ ಸಿದ್ದಲಿಂಗ ದೇವರು ಮಾತನಾಡಿ, ಕೈಲಾಸಧಾಮದಲ್ಲಿ ಕೈಲಾಸ ಸೃಷ್ಟಿಯಾಗಬೇಕು. ಒಂದು ಕಾಲಕ್ಕೆ ಚರಂಡಿ ನಿರು, ಜಾಲಿ ಮುಳ್ಳುಗಳಿಂದ ತುಂಬಿ ಶವಸಂಸ್ಕಾರಕ್ಕೆ ಬರಲು ಹೆದರುವಂತಿದ್ದ ಕೈಲಾಸಧಾಮ ಇಂದು ಸ್ವಚ್ಛಗೊಂಡು ನಳನಳಿಸುತ್ತಿದೆ. ಇಲ್ಲಿ ಸರ್ವಧರ್ಮೀಯರು ಕೈ ಜೋಡಿಸಿ 8 ಲಕ್ಷಕ್ಕೂ ಅಧಿಕ ನಗದು ಹಣ ನೀಡಿದ್ದಾರೆ ಇದರೊಂದಿಗೆ ಆವರಣ ಗೋಡೆ ನಿರ್ಮಾಣ, ಶಿವನಮೂರ್ತಿ ಪ್ರತಿಷ್ಠಾಪನೆಯಂತಹ ಕಾರ್ಯಕ್ಕೂ ದಾನಿಗಳು ಕೈ ಜೋಡಿಸಿದ್ದೀರಿ. ಈಗ ಸರ್ಕಾರದ ವತಿಯಿಂದ ಅಗತ್ಯ ಮೂಲಭೂತ ಸೌಕರ್ಯಗಳು ಒದಗಿಸುವ ಕಾರ್ಯಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿರುವುದು ಸಂತಸ ತಂದಿದೆ ಇದರಿಂದ ಪ್ರೇರಿತಗೊಂಡು ಅನೇಕ ಗ್ರಾಮಗಳಲ್ಲಿ ಕೂಡ ಕೈಲಾಸಧಾಮಗಳು ಜೀರ್ಣೋದ್ದಾರ ಗೊಳ್ಳುತ್ತಿವೆ ಎಂದರು.  ಇಲ್ಲಿ ಪರಿಶುದ್ದವಾದ ಮನಸ್ಸುಗಳು ಹಸ್ತಗಳು ಲೆಕ್ಕಪತ್ರ ನಿರ್ವಹಿಸುತ್ತಿದ್ದು ಯಾವುದೇ ಸಮಯದಲ್ಲಿ ಲೆಕ್ಕಪತ್ರಗಳನ್ನು ಸಾರ್ವಜನಿಕರು ಕೇಳಬಹುದಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಹಿರಿಯರಾದ ಜಿ.ಎಸ್‌.ಕಶೆಟ್ಟಿ, ತಹಶೀಲ್ದಾರ ಅನಿಲಕುಮಾರ ಢವಳಗಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸದಸ್ಯ ವಾಸುದೇವ ಹೆಬಸೂರ ಉಪಸ್ಥಿತರಿದ್ದರು. 

ಕೈಲಾಸಧಾಮಕ್ಕೆ ಜಾತಿ ಧರ್ಮ ಮರೆತು ದಾನ ನೀಡಿದ ಎಲ್ಲ ದಾನಿಗಳಿಗೂ ಟ್ರಸ್ಟ ವತಿಯಿಂದ ಅಭಿನಂದನಾ ಪತ್ರ ಸಲ್ಲಿಸಲಾಯಿತು. ಸಮಾರಂಭದಲ್ಲಿ ವಿವಿಧ ಧರ್ಮೀಯರು ಪಾಲ್ಗೊಂಡಿದ್ದರು. 

ಅಶೋಕ ಹಂಚಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಡಿ.ಬಿರಾದಾರ ಪ್ರಾರ್ಥಿಸಿದರು.  ಟಿ.ಸಿ.ಸಜ್ಜನ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರ್ವಹಿಸಿದರು. ಮಹಾಂತೇಶ ಮುರಾಳ ವಂದಿಸಿದರು. 


ಸುದ್ದಿ ಓದಿ