ವಿಜೃಂಭಣೆಯಿಂದ ಹುನ್ನೂರ ಬೀರಸಿದ್ದೇಶ್ವರ ದೇವರ ಜಾತ್ರೆ
ಜಮಖಂಡಿ: 28: ತಾಲೂಕಿನ ಹುನ್ನೂರ ಗ್ರಾಮದ ಪೌರಾಣಿಕ ಇತಿಹಾಸ ಹೊಂದಿರುವ ಹಾಗೂ ಆಧ್ಯಾತ್ಮಿಕ ಹಾಲುಮತದೇವರ ಕುಲದೇವತೆಯಾದ ಬೀರಸಿದ್ದೇಶ್ವರ ದೇವರ ಜಾತ್ರೆ ವಿಜೃಂಭಣೆಯಿಂದ ಜರುಗಿತು.
ಗ್ರಾಮದೇವಿ ಉಡಿತುಂಬುವ ಕಾರ್ಯಕ್ರಮದಿಂದ ಪ್ರಾರಂಭಗೊಂಡು.ಬೇರೆಬೇರೆ ಊರುಗಳಿಂದ ಬಂದ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಭರಮದೇವರ ಹಾಗೂ ಸುರಮ್ಮದೇವಿಯರ ಉದರದಲ್ಲಿ ಜನಿಸಿದ ದೈವತ್ವ ಸ್ವರೂಪಿ ಬೀರಸಿದ್ದೇಶ್ವರರು ಹುನ್ನೂರ ಗ್ರಾಮದಲ್ಲಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದಾನೆ ಎಂಬುದು ಜನರ ನಂಬಿಕೆಯಾಗಿದೆ.
ಹಾಲುಮತ ಸಮಾಜದ ಮಾಳಿಂಗರಾಯನ ಗುರುಗಳಾದ ಬೀರಸಿದ್ದೇಶ್ವರರು ಮಕ್ಕಳಿಲ್ಲದವರಿಗೆ ಮಕ್ಕಳನ್ನು ನೀಡುತ್ತಾ, ಕಂಕಣ ಭಾಗ್ಯವನ್ನು ಕಲ್ಪಿಸುವ ಕಲ್ಪವೃಕ್ಷದೇವತೆಯಾಗಿದೆ.ದೇವಸ್ಥಾನವು 50 ವರ್ಷಗಳ ಕಾಲ ಇತಿಹಾಸ ಹೊಂದಿದೆ.
ಆಧ್ಯಾತ್ಮಿಕ ಹಾಗೂ ಭಕ್ತಿ ಪ್ರಧಾನವಾದ ಜಾತ್ರೆಯಾಗಿದೆ.ಜಾತ್ರೆ ವಿಶೇಷತೆ ಎಂದರೆ ಪ್ರತಿವರ್ಷ ಬೇರೆ ಬೇರೆ ರೀತಿಯ ವಿಧವಿಧವಾದ ಪ್ರಸಾದವನ್ನು ಮಾಡಿಸುವುದು ಹಾಗೂ ಜಾತ್ರೆಯ ಸಲುವಾಗಿ 6 ಕ್ವಿಂಟಲ್ ಸಜ್ಜಿ ಮತ್ತು ಜೋಳದ ಹಿಟ್ಟನ್ನು ಬೀಸಿ ಮನೆ ಮನೆಗೆ ಕೊಟ್ಟು ಭಕ್ತರಿಂದ ರೊಟ್ಟಿ ಮಾಡಿಸಿ ಬಂದಂತಹ ಭಕ್ತಾದಿಗಳಿಗೆ ಅನ್ನ ಪ್ರಸಾದ ಮಾಡುತ್ತಾರೆ. ಈ ವರ್ಷ 30 ಕ್ವಿಂಟಲ್ ಬುಂದೆ ಹಾಗೂ ಅನ್ನ ಸಾರು ಮಾಡಿದ್ದು ಒಂದು ವಿಶೇಷವಾಗಿದೆ.
ಜಾತ್ರೆಯಲ್ಲಿ ಜಮಖಂಡಿ, ಅಥಣಿ, ಬೀಳಗಿ, ತಿಕೋಟಾ, ರಬಕವಿ -ಬನಹಟ್ಟಿ ತಾಲೂಕಿನ 37 ಅಧಿಕ ಹಳ್ಳಿಗಳಿಂದ 350ಕ್ಕೂ ಅಧಿಕ ವಾದ್ಯಮೇಳದವರು ಭಾಗವಹಿಸಿದ್ದಾರು. ಗ್ರಾಮದ ಸುಮಾರು 500ಕ್ಕೂ ಅಧಿಕ ಮುತ್ತೈದೆಯರು ಪೂರ್ಣಕುಂಭ ಹೊತ್ತು ಜಾತ್ರೆಗೆ ಮೆರಗು ತಂದರು.10 ಕ್ವಿಂಟಲ್ ಅರಿಶಿಣದ ಭಂಡಾರವನ್ನು ಭಕ್ತರು ಸಂಭ್ರಮದಿಂದ ಹಾರಿಸಿ ಜಾತ್ರೆಯಲ್ಲಿ ಭಕ್ತಿ ಪರಾಕಾಷ್ಠೆ
ಮೆರೆದರು.
ಜಾತ್ರೆಯಲ್ಲಿ ಹುನ್ನೂರಿನ ಬೀರಸಿದ್ದೇಶ್ವರ ಹಾಗೂ ಕಾಶಿಲಿಂಗೇಶ್ವರ ಪಲ್ಲಕ್ಕಿ, ಕಡಪಟ್ಟಿಯ ಮಹಾಲಿಂಗೇಶ್ವರ ಪಲ್ಲಕ್ಕಿ ಹಾಗೂ ಶ್ರೀಗುರು ಯಳಮಳಸಿದ್ದೇಶ್ವರ ಪಲ್ಲಕ್ಕಿ, ಶೂರ್ಾಲಿಯ ಮಾಳಿಂಗೇಶ್ವರ ಪಲ್ಲಕ್ಕಿ, ಆಲಕನೂರು ಕರಿಸಿದ್ದೇಶ್ವರ ದೇವರ ಕುದುರೆ ಸಹ ಭಾಗವಹಿಸಿತು.
ಇದೆ ವೇಳೆ ಗದ್ದಿಗೆಯ ಪೂಜಾರಿ ರಾಮಪ್ಪ ಜಕ್ಕನ್ನವರ, ಸಿದ್ಧಗಿರಿ ಜಕಣ್ಣವರ, ಮಲ್ಲಪ್ಪ ಜಕ್ಕಣ್ಣವರ, ಕಲ್ಲಪ್ಪ ದಪ್ಪೇದಾರ, ಡಾ.ಅರುಣ ದಪ್ಪೇದಾರ, ಮಲ್ಲಪ್ಪ ಶಿರೋಳ, ತಮ್ಮಣಿ ನಾಯಕ, ಮಾಯಪ್ಪ ದಪ್ಪೇದಾರ ಪ್ರಮುಖರು ಇದ್ದರು.