ತಾಳಿಕೋಟಿ

ಆಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ

ಆಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ

ತಾಳಿಕೋಟೆ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಪಟ್ಟಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆ ಹಿನ್ನಲೆಯಲ್ಲಿ ಅಂತ್ಯಗೊಳಿಸಲಾಯಿತು. 

ಪಟ್ಟಣದ ಮಹಾರಾಣಾ ಪ್ರತಾಪ್ ವೃತ್ತದಲ್ಲಿ ಹಡಗಿನಾಳ ರಸ್ತೆಯ ಡೋಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ರಸ್ತೆಯನ್ನು ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಾಣ ಮಾಡಬೇಕು. ಪಟ್ಟಣದ ಪುರಸಭೆಯಲ್ಲಿ ನಡೆದ ಅಕ್ರಮಗಳ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ದಿ.11 ರಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಗುರವಾರ ಬೆಳಿಗ್ಗೆಯಿಂದ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿತ್ತು. ವಿಷಯ ತಿಳಿದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ತಹಶೀಲ್ದಾರ ಅನೀಲಕುಮಾರ ಡವಳಗಿ, ಕೆಆರ್‌ಡಿಸಿಆಯ್‌ಎಲ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್‌.ಬಿ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿಪಿಆಯ್ ಆನಂದ ವಾಗ್ಮೋಡೆ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡೋಣಿ ನದಿ ಸೇತುವೆ ರಸ್ತೆ ಕಾಮಗಾರಿ ನೇರವಾಗಿ ನಿರ್ಮಾಣ ಮಾಡಲು ಸರ್ವೆ ಕಾರ್ಯ ಮಾಡಲು ಅಧಿಕಾರಿಗಳಿಗೆ ಸೂಚನೆ ಮಾಡಲಾಗಿದೆ. ಸರ್ವೆ ಕಾರ್ಯ ವರದಿ ಬಂದ ನಂತರ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವದು. ಪುರಸಭೆಯಲ್ಲಿ ಉದ್ಯಾನವನ ಹಾಗೂ ಸಾರ್ವಜನಿಕ ಜಾಗೆಗಳ ಕುರಿತು ಸಮಗ್ರವಾಗಿ ಪರೀಶೀಲಿಸಿ ಅಗತ್ಯ ಕ್ರಮ ಜರುಗಿಸಲಾಗುವದು. ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ನಿಯಮಾನುಸಾರ ಕ್ರಮ ಕೈಕೊಳ್ಳಲಾಗುವದು ಎಂದು ತಿಳಿಸಿ ಹೋರಾಟಗಾರರಿಗೆ ಲಿಖಿತ ಪತ್ರವನ್ನು ನೀಡಿದರು. ಲಿಖಿತ ಭರವಸೆಯನ್ನು ಪಡೆದುಕೊಂಡ ಹೋರಾಟಗಾರರು ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಮೇ.22 ರೊಳಗಾಗಿ ಭರವಸೆ ಈಡೇರಿಸದಿದ್ದರೇ ಈಗಿನ ಹೋರಾಟಕ್ಕಿಂತಲೂ ಉಗ್ರವಾದ ಹೋರಾಟವನ್ನು ಕೈಕೊಳ್ಳಲಾಗುವದು ಎಂದರು. ಹೋರಾಟಗಾರರಿಗೆ ಎಳೆ ನೀರು ಕುಡಿಸುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ಸಾಮಾಜಿಕ ಕಾರ್ಯಕರ್ತರಾದ ನದಿಂ ಕಡು, ಪತ್ತೆಮಹಮ್ಮದ ನಾಯ್ಕೋಡಿ, ಸುಭಾಸ ಗೌಡಗೇರಿ, ಸುರೇಶ ಹಜೇರಿ, ಸುರೇಶ ಅಮರಸಿಂಗ ಹಜೇರಿ, ರವಿ ಕಟ್ಟಿಮನಿ, ಶಿವರಾಜ ಗುಂಡಕನಾಳ, ಕೆ.ಎಚ್‌.ಪಾಟೀಲ, ರಮೇಶ ಮೋಹಿತೆ, ಚಂದ್ರಶೇಖರ ಮಠಪತಿ, ಮಲಕಾಜಿ ಮದರಿ, ಅಶೋಕ ವಠಾರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ