ಗಣ್ಯರ ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮ ; ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ಪುರಸಭಾ ಚುನಾವಣೆಯ ಆಕಾಂಕ್ಷಿಗಳ, ಕಾರ್ಯಕರ್ತರ ಪೂರ್ವಭಾವಿ ಸಭೆ
ಅಥಣಿ 06: ಅಥಣಿ ಪುರಸಭಾ ಚುನಾವಣೆಯಲ್ಲಿ ವಾರ್ಡಗಳ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿಯಿಂದ ರಚನೆಯಾದ ಗಣ್ಯರ ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮ ನಿರ್ಧಾರ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.
ಅವರು ಸೋಶಿಯಲ್ ಕ್ಲಬ್ನಲ್ಲಿ ಆಯೋಜಿಸಿದ್ದ ಪುರಸಭಾ ಚುನಾವಣೆಯ ಆಕಾಂಕ್ಷಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಅಥಣಿ ಪುರಸಭೆಗೆ ಇದೇ ಡಿ.27 ರಂದು 27 ವಾರ್ಡಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ 8ರಿಂದ ನಾಮಪತ್ರ ಸಲ್ಲಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ ಇದಕ್ಕಾಗಿ ಎಲ್ಲ ವಾರ್ಡಗಳಿಂದಲೂ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳಿಂದ ಪಕ್ಷದ ಟಿಕೇಟಗಾಗಿ ಬೇಡಿಕೆ ಬಂದಿದೆ ಆದರೆ ನಾವು ಆಯ್ಕೆ ಮಾಡಬೇಕಿರುವುದು ಕೇವಲ 27 ಅಭ್ಯರ್ಥಿಗಳನ್ನು ಮಾತ್ರ ಹೀಗಾಗಿಯೇ ಬಿಜೆಪಿಯಿಂದ ರಚನೆಯಾದ ಸಮಿತಿ ಸದಸ್ಯರು ಎರಡು ಗುಂಪುಗಳಲ್ಲಿ ಎಲ್ಲ 27 ವಾರ್ಡಗಳಿಗೆ ತೆರಳಿ ಸ್ಥಳೀಯರೊಂದಿಗೆ ಚರ್ಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಹೆಸರು ಸೂಚಿಸಲಾಗುವುದು. ಇದಕ್ಕಾಗಿ ಇನ್ನೆರಡು ದಿನಗಳು ಬೇಕಾಗುತ್ತವೆ ಎಂದು ಹೇಳಿದರು.
ಒಂದು ವಾರ್ಡಗೆ ಬಿಜೆಪಿಯ ಅನೇಕ ಕಾರ್ಯಕರ್ತರು ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ ನಾವು ಅಭಿಪ್ರಾಯ ಸಂಗ್ರಹದ ಜೊತೆಗೆ ಆಕಾಂಕ್ಷಿಗಳ ಸಾಮಾಜಿಕ ಸ್ಥಾನಮಾನ, ಪಕ್ಷದ ಕೆಲಸ ಮಾಡಿದ ಅನುಭವ ಜೊತೆಗೆ ಶಿಕ್ಷಣ ಎಲ್ಲವನ್ನೂ ಪರೀಶೀಲಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದ ಅವರು ಅಭ್ಯರ್ಥಿ ಯಾರೇ ಆಗಲಿ ಎಲ್ಲರೂ ಕೂಡ ಅಥಣಿ ನಗರದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ ಎಂದರು.
ಅಭ್ಯರ್ಥಿ ಆಯ್ಕೆ ಸಮೀತಿಯ ಅನೀಲರಾವ ದೇಶಪಾಂಡೆ ಮಾತನಾಡಿ, ಎಲ್ಲ ವಾರ್ಡಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದು, ಕೇವಲ 27 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಅಭ್ಯರ್ಥಿ ಯಾರೇ ಆಗಲಿ ಪಕ್ಷದ ಪರವಾಗಿ ಎಲ್ಲರೂ ಸೇರಿ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಆಗ ಮಾತ್ರ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿ ಪುರಸಭೆ ಬಿಜೆಪಿ ಮಡಿಲಿಗೆ ಬರಲಿದೆ ಎಂದರು. ಆಕಾಂಕ್ಷಿಗಳು ಪಕ್ಷದ ಅಧಿಕೃತ ಅರ್ಜಿಯನ್ನು 1000 ಶುಲ್ಕ ಪಾವತಿಸಿ ಸಮೀತಿ ಸದಸ್ಯರಿಗೆ ನೀಡಬೇಕು ಎಂದರು.
ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ, ಸಂಘಟಿತರಾಗಿ ಪುರಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಬಿಜೆಪಿ ಅಭ್ಯರ್ಥಿಗಳ ಗೆಲುವು ಆಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಮಾಧ್ಯಮ ಜಿಲ್ಲಾ ಸಹ ಸಂಚಾಲಕ ವಿನಯ ಹೊರಟ್ಟಿ, ಅಥಣಿ ಮಂಡಲ ಅಧ್ಯಕ್ಷ ಅಣ್ಣಸಾಹೇಬ ನಾಯಿಕ, ಅಭ್ಯರ್ಥಿ ಆಯ್ಕೆ ಸಮೀತಿಯ ಆನಂದ ಟೊಣಪಿ, ಅಜೀತ ಇನಾಮದಾರ, ಶಿವುಕುಮಾರ ಸವದಿ, ಮಹೇಶ ಗುಂಡಾ, ಹಣಮಂತ ಕಾಲವೆ, ಡಾ.ಎಮ್.ಜಿ.ಹಂಜಿ, ನಿಂಗಪ್ಪಾ ಖೋಕಲೆ, ಸುಶೀಲ ಪತ್ತಾರ, ಶಿವಾನಂದ ದಿವಾನಮಳ, ಶ್ರೀಶೈಲ ಹಳ್ಳದಮಳ, ರಮೇಶ ಪಟ್ಟಣ, ಅಶೋಕ ದಾನಗೌಡರ, ಪ್ರಭಾಕರ ಚವ್ಹಾಣ ಧುರೀಣರಾದ ಚಿದಾನಂದ ಸವದಿ, ಎಸ್.ಎ.ಮುದಕಣ್ಣವರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.