ನಿಜಗುಣ ಶಿವಯೋಗಿಗಳ ಕೊಡುಗೆ ಅಪಾರ: ಸ್ವಾಮೀಜಿ
ಲೋಕದರ್ಶನ ವರದಿ
ತಾಳಿಕೋಟೆ 29: ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವೀರಶೈವ ಸಾಹಿತ್ಯಕ್ಕೆ ನಿಜಗುಣ ಶಿವಯೋಗಿಗಳ ಕೊಡುಗೆ ಅಪಾರವಾದುದು, ವೇದವೇದಾಂತಗಳ ಸಾರವನ್ನೆಲ್ಲ ತಮ್ಮ ಕೃತಿಗಳಲ್ಲಿ ಅಳವಡಿಸಿ ಮಾನವ ಜೀವನವನ್ನು ಓನ್ನತ್ಯಕ್ಕೇರಿಸುವ ಮಾರ್ಗಗಳನ್ನು ತಮ್ಮ ಕೈವಲ್ಯ ಪದ್ಧತಿ, ವಿವೇಕ ಚಿಂತಾಮಣಿ, ಅನುಭವಸಾರದಲ್ಲಿ ಹಿಡಿದಿಟ್ಟಿದ್ದಾರೆ ಎಂದು ಪ್ರವಚನಕಾರ ಬಾಗಲಕೋಟೆಯ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಆನಂದಾಶ್ರಮದಲ್ಲಿ ಶ್ರೀಮನ್ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಪ್ರಯುಕ್ತ ಒಂಬತ್ತು ದಿನಗಳ ಕಾಲ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಅವ್ಯಾಹತವಾಗಿ ನಡೆದುಕೊಂಡ ಬಂದ “ನಿಜಗುಣ ಶಿವಯೋಗಿಗಳ ತತ್ವ ಚಿಂತನ'' “ಜ್ಞಾನ ಪ್ರತಿಪಾದನ ಸ್ಥಳ(ಕೈವಲ್ಯ ಪದ್ಧತಿ)'' ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ರಾಜನಾಗಿದ್ದ ನಿಜಗುಣರು ತಮ್ಮ ಜೀವನದಲ್ಲಿ ಎದುರಾದ ಘಟನೆಯಿಂದ ಪರಿವರ್ತಿತರಾಗಿ ಶಿವಯೋಗದ ಮಾರ್ಗ ಹಿಡಿದರು. ಸಾಹಿತ್ಯ ಮತ್ತು ಸಂಗೀತದ ಪಾಂಡಿತ್ಯವನ್ನು ಪಡೆಯುವ ಜತೆಗೆ ಅಧ್ಯಾತ್ಮ ಸಾಧನೆ ಮಾಡಿದ ಮಹಾನ್ ತ್ಯಾಗ ಯೋಗಿಯಾಗಿ ಹೊರ ಹೊಮ್ಮಿದವರು. ಬದುಕಿನ ನಿಜವಾದ ರಾಜ ಮಾರ್ಗವನ್ನು ಜನರಿಗೆ ತಮ್ಮ ಕೈವಲ್ಯ ಪದ್ಧತಿಯ ಮೂಲಕ ತೋರಿಸಿಕೊಟ್ಟರು. ಅವರ ಚಿಂತನಾಯುಕ್ತ ಷಟ್ಶಾಸ್ತ್ರಗಳನ್ನು ಅರ್ಥ ಮಾಡಿಕೊಂಡರೆ ಅವರ ಎಂಥ ಅದ್ಭುತ ಸಾಧಕರು ಎಂಬುದು ತಿಳಿಯುತ್ತದೆ. ನಿಜಗುಣರು ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠ ಮಟ್ಟದ ಕವಿ, ವಿಶ್ವ ಕೋಶ ರಚನೆಯ ಮೂಲಕ ಕನ್ನಡಿ ಗರಿಗೆ ಸಮಸ್ತ ಲೌಖಿಕ ಹಾಗೂ ಅಲೌಖಿಕ ಜ್ಞಾನ ಭಂಡಾರವನ್ನು ಪರಿಚಯಿಸಿದವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೋರವಾರ ಚೌಕಿಮಠದ ಮುರುಗೇಂದ್ರ ಸ್ವಾಮೀಜಿ ಮಾತನಾಡಿ, ನಿಜಗುಣ ಶಿವಯೋಗಿಗಳು ತಮ್ಮ ಕೈವಲ್ಯ ಪದ್ಧತಿಯ ಪದ್ಯಗಳ ಮೂಲಕ ಸತ್ಯ ದರ್ಶನ ಮಾಡಿಸಿದ ಮಹಾನ್ ಯೋಗಿ ಎಂದರು.
ವೇದಿಕೆಯಲ್ಲಿ ಆನಂದಾಶ್ರಮದ ಅಧ್ಯಕ್ಷ ವೇ.ಮೂ.ಎಸ್.ಎಂ.ಬೇನಾಳಮಠ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ನೆರವಾದ ಹಲವು ಭಕ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಆರ್.ಬಿ.ದಾನಿ ನಿರ್ವಹಿಸಿದರು. ಉಮಾ ಘಿವಾರಿ ಸ್ವಾಗತಿಸಿದರು. ಪ್ರವಚನ ಕಾರ್ಯಕ್ರಮದಲ್ಲಿ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.