ಪಕ್ಷಿಗಳಿಗೆ ಅರವಟ್ಟಿಗೆ ನೀಡಿಕೆ: ಪಕ್ಷಿಪ್ರೇಮ ಮೆರೆದ ಕದಮ್
ತಾಳಿಕೋಟೆ12: ಪಟ್ಟಣದ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇರುವ ಸಸಿಗಳಿಗೆ ಕಟ್ಟುವ ಸಲುವಾಗಿ ಪಕ್ಷಿಗಳಿಗಾಗಿ ನೀರಿನ ಅರವಟ್ಟಿಗೆಗಳನ್ನು ಸಮಾಜ ಸೇವಕ ಹಸಿರು ಸಂಪದ ಬಳಗದ ಸದಸ್ಯ ಸಂತೋಷ ಕದಮ್ ಅವರು ನೀಡಿದರು.
ಪಟ್ಟಣದ ಶಿವಭವಾನಿ ಊಟದ ಮನೆ ಮಾಲೀಕರು ಆದ ಸಂತೋಷ ಕದಮ್ ಅವರು ಬಾಲ ಭಾರತಿ ಶಿಕ್ಷಣ ಸಂಸ್ಥೆಗೆ ತಾವು ತಯಾರಿಸಿಕೊಂಡು ಬಂದಿದ್ದ ಪಕ್ಷಿಗಳಿಗಾಗಿ ನೀರಿನ ಅರವಟ್ಟಿಗೆಗಳನ್ನು ನೀಡಿ ಪರಿಸರ ಪ್ರೇಮವನ್ನು ಮೆರೆದರು. ಅವುಗಳನ್ನು ಸಂಸ್ಥೆಯ ಸಿಬ್ಬಂದಿ ಶಾಲಾ ಆವರಣದಲ್ಲಿನ "ಮಕ್ಕಳ ಉದ್ಯಾನ" ದಲ್ಲಿನ ಗಿಡಗಳಗೆ ಇವುಗಳನ್ನು ಕಟ್ಟಲಾಯಿತು. ಬೇಸಿಗೆಯಲ್ಲಿ ನೀರಿನ ಮೂಲಗಳು ಕಡಿಮೆಯಾಗುವುದರಿಂದ ದಾಹಗೊಂಡ ಹಕ್ಕಿಗಳಿಗೆ ನೀರುಣಿಸಲು ಅನುವು ಮಾಡಿಕೊಟ್ಟರು. ಈ ಪರಿಸರ ಪೂರಕ ಕಾರ್ಯದಲ್ಲಿ ಸಂಸ್ಥೆಯ ಶಿಶು ಮಂದಿರ, ಪ್ರಾಥಮಿಕ ಶಾಲೆ ಪ್ರೌಢಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು, ಮಾತಾಜೀ ಯವರೂ ಭಾಗವಹಿಸಿದರು. ಮಕ್ಕಳು ಹಾಗೂ ಶಿಕ್ಷಕರು ನಿತ್ಯ ನೀರಿನ ಅರವಟ್ಟಿಗೆ ಖಾಲಿಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಸಂತೋಷ ಅವರು ತಮ್ಮ ಹೊಟೇಲನಲ್ಲಿ ಬಳಸಿ ಬೀಸಾಡಬಹುದಾಗಿದ್ದ ಉಪ್ಪಿನಕಾಯಿಯ ಖಾಲಿ ಪ್ಲಾಸ್ಟಿಕ್ ಭರಣಿಗಳನ್ನು ನೀರಿನ ಅರವಟ್ಟಿಗೆ ಮಾಡಿ ತಂದಿದ್ದರು.
ಶ್ರೀಮಠದ ಪರಿಸರ ಕಾಳಜಿ:- ಪಟ್ಟಣದ ಪ್ರತಿಷ್ಠಿತ ಮಠವೆನ್ನಿಸಿರುವ ಖಾಸ್ಗತೇಶ್ವರಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಕಸದಲ್ಲಿ ರಸ ಎನ್ನುವಂತೆ ಕುಡಿದು ಬೀಸಾಡಲ್ಪಟ್ಟ ಐನೂರಕ್ಕೂ ಬಿಸಲೇರಿ ಬಾಟಲ್ ಗಳನ್ನು ಸಂಗ್ರಹಿಸಿ, ಅವುಗಳನ್ನು ಪಕ್ಷಿಗಳಿಗಾಗಿ ನೀರಿನಅರವಟ್ಟಿಗೆ ತಯಾರಿಸಿದ್ದರು. ಪಟ್ಟಣದಲ್ಲಿ ಪುರಸಭೆ, ಅರಣ್ಯ ಇಲಾಖೆ ಹಾಗೂ ಹಸಿರು ಸಂಪದ ಬಳಗದ ಸಹಯೋಗದಲ್ಲಿ ಬೆಳೆಸಿರುವ ರಸ್ತೆ ಬದಿಯ ಗಿಡಗಳಿಗೆ ಇವುಗಳನ್ನು ಕಟ್ಟಲಾಯಿತು. ಅಲ್ಲದೇ ವಿವಿಧ ಓಣಿಯಲ್ಲಿನ ಮನೆಗಳಿಗೂ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಪಶುಪಕ್ಷಿಗಳು ಆಹಾರ ನೀರಿಲ್ಲದೇ ಬಳಲುತ್ತವೆ. ಅವುಗಳಿಗೆ ಆಹಾರ, ನಿರು ನಿಡುವುದು ಮನುಷ್ಯರಾದ ನಮ್ಮ ಕರ್ತವ್ಯವಾಗಿದ್ದು ಪ್ರತಿ ಮನೆಗಳಲ್ಲಿ ಪಶುಪಕ್ಷಿಗಳಿಗಾಗಿ ನೀರಿನ ಅರವಟ್ಟಿಗೆ ಇಡಬೇಕು. ಆಹಾರ ನೀಡಬೇಕು ಎಂದು ಮನವಿ ಮಾಡಿದರು.