ಮೈನವಿರೇಳಿಸಿದ ಕಂಚಾವೀರರ ಶಸ್ತ್ರ ಪವಾಡಗಳು
ಹೂವಿನಹಡಗಲಿ 06: ಸುಕ್ಷೇತ್ರ ಮೈಲಾರಮೈಲಾರಲಿಂಗೇಶ್ವರ ಜಾತ್ರೆಯ ಎರಡನೇ ದಿನ ಗುರುವಾರ ಮಧ್ಯಾಹ್ನ 3ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನೇತೃತ್ವದಲ್ಲಿ ಕಂಚಾವೀರರಿಂದ ಶಸ್ತ್ರ ಪವಾಡ ಹಾಗೂ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ನಡೆದವು.ಕಂಚಾವೀರರು ಪ್ರಾರಂಭದಲ್ಲಿ ತಮ್ಮ ಪವಾಡ ಶಸ್ತ್ರಗಳನ್ನು ಪೂಜಿಸಿದ ನಂತರ ಗುರು ವೆಂಕಪ್ಪಯ್ಯನವರಿಂದ ಆಶೀರ್ವಾದ ಪಡೆದ ಈ ಬಾರಿ ಕಂಚಾವೀರರಾದ ವಸಂತ,ಮಾಲತೇಶ, ಚೇತನ ಹಾಗೂ ಫಕ್ಕೀರಿಶ ಅವಿವಾಹಿತ ಯವಕರು ತಮ್ಮ ಕಾಲಿನ ಮೀನಗಂಡದಲ್ಲಿ ಸುಮಾರು 4 ಅಡಿ ಉದ್ದದ ಕಬ್ಬಿಣದ ಸರಳನ್ನು ದಾಟಿಸುವ ಪವಾಡ ಮಾಡಿದರು.
ಇದು ನೋಡುಗರ ಮೈ ರೋಮಾಂಚನ ವೆನಿಸುವಂತ್ತಿತ್ತು. ನೆರೆದ ಸಹಾಸ್ರಾರು ಭಕ್ತರು ಏಳುಕೋಟಿಗೋ.. ಏಳುಕೋಟಿಗೋ... ಎಂದು ಹರ್ಷೋದ್ಘಾರ ಗೈದರು.ಅದೇ ರೀತಿ ಕಂಚಾವೀರ ಕಾಲಿನಲ್ಲಿ ಬಗಣಿ ಗೂಟ ಬಡಿದುಕೊಂಡು ಹಗ್ಗ ಹಾಗೂ ಮುಳ್ಳಿನ ಕಂಟೆ ದಾಟಿಸಿಕೊಂಡರು ಮತ್ತು ಮುಂಗೈ ಆರತಿ ಪವಾಡ ಮಾಡಿದರು. ಸರಪಳಿ ಬಾಬುದಾರರಾದ ಉಮೇಶ್ ದಳವಾಯಿ, ಅನಿಲ್ ದಳವಾಯಿ ಕಬ್ಬಿಣ ಸರಪಳಿ ಹರಿಯುವ ಪವಾಡ ಮಾಡಿದರು.ದೇವಸ್ಥಾನದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಸವಿತಾ , ಕಾರ್ಯನಿರ್ವಹಣಾಧಿಕಾರಿ ಮಲ್ಲಫ್ಪ .ಸಿಪಿಐ ದೀಪಕ್ ಬೋಸರೆಡ್ಡಿ, ಪೊಲೀಸ್ ಸಿಬ್ಬಂದಿ ಇದ್ದರು.