ಸೌಲಭ್ಯ ವಂಚಿತ ಶಬರಿಗಿರಿ ಕಾಲೋನಿ: ನಿವಾಸಿಗರ ಪರದಾಟ
ಶಿಗ್ಗಾವಿ 18: ಪಟ್ಟಣದ ಗುಡ್ಡದ ದ್ಯಾಮವ್ವ ದೇವಸ್ಥಾನಕ್ಕೆ ಹೋಗುವ ಮದ್ಯದಲ್ಲಿ ವಾರ್ಡ ನಂಬರ 6 ರ ಶಬರಿಗಿರಿ ಕಾಲೋನಿಯ ಮನೆಗಳ ಅಕ್ಕಪಕ್ಕದಲ್ಲಿ ನಿಂತಿರುವ ಕೊಳಚೆ ನೀರಿನ ದುರ್ವಾಸನೆ ಹಾಗೂ ಸುಮಾರು 6 ವರ್ಷಗಳಿಂದ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಕಾರಣದಿಂದ ಸ್ಥಳೀಯ ನಿವಾಸಿಗಳ ಅಸಮಾದಾನಕ್ಕೆ ಕಾರಣವಾಗಿದೆ.
ಪಟ್ಟಣದ ಶಬರಿಗಿರಿ ಕಾಲೋನಿಯಲ್ಲಿ ನೂರರಕ್ಕಿಂತ ಹೆಚ್ಚಿನ ಮನೆಗಳಿದ್ದು, ರೈತರು, ನೌಕರಸ್ಥರು, ವ್ಯಾಪಾಸ್ಥರು ಹೆಚ್ಚಾಗಿ ವಾಸವಾಗಿದ್ದಾರೆ. ಪಕ್ಕದ ರಸ್ತೆಯಲ್ಲಿನ ಮಳೆ ನೀರು ಹರಿದು ಹೋಗದೆ ಒಂದೆಡೆ ನಿಂತು ಕೊಳಚೆ ದುರ್ವಾಸನೆ ಹರಡುತ್ತಿದೆ. ಹಲವು ವರ್ಷಗಳಿಂದ ಇಲ್ಲಿನ ಚರಂಡಿ, ರಸ್ತೆಗಳು ಸುಧಾರಣೆ ಕಂಡಿಲ್ಲ. ಮಳೆಗಾಲದಲ್ಲಿ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗುತ್ತವೆ. ಕೆಸರಿನಲ್ಲಿ ವಾಹನಗಳ ಸಂಚಾರಕ್ಕಾಗಿ ಪರದಾಡುವಂತಾಗಿದೆ. ನಿತ್ಯ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ಮತ್ತು ವಯೋವೃದ್ಧರು ಜಾರಿಬಿದ್ದು ತೀವ್ರ ಗಾಯಗಳಾದ ಉದಾಹರಣೆಗಳಿವೆ. ರಸ್ತೆಯಲ್ಲಿನ ತಗ್ಗು ಗುಂಡಿಗಳಿಂದ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಸವಾರರು ಮತ್ತು ಜನರ ಓಡಾಟಕ್ಕೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆಗಾಲ ಬಂದರೆ ಸಾಕು ಇಲ್ಲಿನ ಜನ ತಮ್ಮ ಮನೆಗಳಿಂದ ಹೊರ ಹೋಗಲು ಸಾಧ್ಯವಿಲ್ಲದಾಗಿದೆ. ಮಹಿಳೆಯರು, ಮಕ್ಕಳು ಪರಿಸ್ಥಿತಿ ಹೇಳ ತೀರದಾಗಿದೆ. ಮಳೆಗಾಲ ಮುಗಿಯುವವರೆಗೆ ತಮ್ಮ ವಾಹನಗಳನ್ನು ಮನೆಯಿಂದ ಹೊರ ತೆರೆಯದಂತಾಗಿದೆ. ಇಲ್ಲಿನ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಮನವಿ ಮಾಡುತ್ತಾ ಬರಲಾಗಿದೆ. ಆದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಪ್ರವೀಣ ಪಾಟೀಲ ಕಳವಳ ವ್ಯಕ್ತಪಡಿಸಿದರು.
ರಸ್ತೆ ಬದಿಗೆ ಸರಿಯಾದ ಚರಂಡಿಗಳಿಲ್ಲ ಹಾಗಾಗಿ ಮಳೆ ಬಂದರೆ ಚರಂಡಿಯಲ್ಲಿನ ಕೊಳಚೆ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ರಸ್ತೆ ಬದಿಗೆ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಹಾವು, ಚೇಳುಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕು ಕಳೆಯುವಂತಾಗಿದೆ. ಇಷ್ಟಾದರೂ ಸಹ ಇಲ್ಲಿನ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿಲ್ಲ ಎಂದು ಇಲ್ಲಿನ ನಿವಾಸಿ ಮಂಜುಳಾ ಅಗಸಿನಮನಿ ತಮ್ಮ ಅಳಲು ತೋಡಿಕೊಂಡರು.
ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಂಡು ಸುಮಾರು ವರ್ಷಗಳಿಂದ ಈ ಬಡಾವಣೆಯಲ್ಲಿ ವಾಸವಾಗಿದ್ದೇವೆ. ಈ ಬಡಾವಣೆಗೆ ಕಾಯಕಲ್ಪ ನೀಡಬೇಕೆಂಬ ನೀಡಿದ ಮನವಿಗಳಿಗೆ ಪ್ರಯೋಜನವಾಗಿಲ್ಲ. ಕಾಡು ಜನರಂತೆ ಇಲ್ಲಿನ ಜನರೆಲ್ಲ ವಾಸಿಸುವಂತಾಗಿದೆ ಎಂದು ಶಬರಿಗಿರಿ ನಿವಾಸಿಗಳಾದ ವಸಂತಸಿಂಗ್ ಡಿ, ಶಿವಲಿಂಗಪ್ಪ ಹುರಳಿ, ಅಶೋಕ ಮುಕಪ್ಪನವರ, ಮಂಜು ಬಂಕಾಪೂರ, ರಮೇಶ ಹಿತ್ತಲಮನಿ, ಕೀರ್ತಿ ನೆಲೋಗಲ್ಲ, ಮಂಜುಳಾ ಬಡಿಗೇರ ಆತಂಕ ವ್ಯಕ್ತಪಡಿಸಿದರು.
ಮೊದಲಿಗೆ ಶಬರಿಗಿರಿಯ ಕಾಲೋನಿಗಳಿಗೆ ಪಿಐಡಿ ಸಂಖೈ ಬಂದಿರಲಿಲ್ಲ ಈಗ ಲಭ್ಯವಾಗಿದ್ದು, ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಗೃಹ ಸಚಿವರ ಕೃಪಾಕಟಾಕ್ಷದಿಂದ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ ಹಾಗೂ ಅದರ ಅಕ್ಕ ಪಕ್ಕದ ಕಾಲೋನಿಯಲ್ಲಿ ನಗರೋತ್ತಾನ ಯೋಜನೆ 3 ರರಡಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದು ಬರುವ ದಿನಗಳಲ್ಲಿ ಹಂತ ಹಂತವಾಗಿ ಮೂಲಭೂತ ಸೌಲಭ್ಯ ಕಲ್ಪಿಸುತ್ತೇವೆ.
ಶ್ರೀಕಾಂತ ಬುಳ್ಳಕ್ಕನವರ
ಅಧ್ಯಕ್ಷರು ಪುರಸಭೆ ಶಿಗ್ಗಾವಿ.
ಮೂಲಭೂತ ಸೌಲಭ್ಯವಂಚಿತರಾಗಲು ಕಾರಣ ಸೈಟ ಮಾಲಕ ಏಕೆಂದರೆ ಅವರು ರಸ್ತೆ, ಗಟಾರ, ವಿಧ್ಯುತ್ತ ವ್ಯವಸ್ಥೆ ಮಾಡಿಕೊಡಬೇಕಾಗಿತ್ತು ಆದರೆ ಅವರು ಮಾಡದ ಕಾರಣ ಹಲವು ತಾಂತ್ರಿಕ ತೊಂದರೆಗಳಿದ್ದು ಸರಿಪಡಿಸಿದ್ದು ಬರುವ ದಿನಗಳಲ್ಲಿ ಪುರಸಭೆ ನಿಯೋಗ ಅಭಿವೃದ್ದಿ ವಿಚಾರವಾಗಿ ಬೆಂಗಳೂರಿಗೆ ಹೋಗಿ ಬಂದ ನಂತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ.
ಮಂಜುನಾಥ ಬ್ಯಾಹಟ್ಟಿ
ಉಪಾಧ್ಯಕ್ಷರು ಪುರಸಭೆ ಶಿಗ್ಗಾವಿ.
ಪುರಸಭೆ ವಾರ್ಡ 6 ರ ಶಬರಿಗಿರಿ ಕಾಲೋನಿಯ ಮೂಲಭೂತ ಸೌಲಭ್ಯ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತಂದಿದ್ದು ಬರುವ ದಿನಗಳಲ್ಲಿ ವಿಶೇಷ ಅನುಧಾನದಡಿಯಲ್ಲಿ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಮಮ್ತಾಜ ಗೋಟಗೋಡಿ
ಪುರಸಭೆ ಸದಸ್ಯರು ಶಿಗ್ಗಾವಿ.