ಶೀಘ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ: ರಸ್ತೆ, ಗಟಾರ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ
ಬ್ಯಾಡಗಿ 31: ಉಕ್ಕುಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಂಜೂರಾತಿಗೆ ಈಗಾಗಲೇ ತಾವು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಮಂಜೂರಾತಿ ಸಿಗುವುದು ಖಚಿತವೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಣೆಬೆನ್ನೂರು ತಾಲೂಕಿನ ಉಕ್ಕುಂದ ಹಾಗೂ ಜೋಯಿಸರ ಹಳ್ಳಿ ಗ್ರಾಮಗಳಲ್ಲಿ ಎಸ್ಸಿ, ಎಸ್ಟಿ, ಓಣಿಯಲ್ಲಿ ತಲಾ 25 ಲಕ್ಷ ರೂ.ನಂತೆ ಒಟ್ಟು 50 ಲಕ್ಷ ರೂ.ಗಳ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಗಟಾರ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಹಾಗೂ ರಾಣೆಬೆನ್ನೂರು ತಾಲೂಕಿನ ಉಕ್ಕುಂದ ಗ್ರಾಮಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡುವಂತೆ ಈಗಾಗಲೇ ತಾವು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಉಕ್ಕುಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2ಎಕರೆ ಜಮೀನಿನ ಅವಶ್ಯಕತೆಯಿದ್ದು, ಗ್ರಾಮದಲ್ಲಿ ಯಾರಾದರೂ ಜಮೀನನ್ನು ಒದಗಿಸಲು ಮುಂದಾದರೆ ಸರ್ಕಾರಿ ನಿಯಮಾನುಸಾರ ಅದನ್ನು ತೆಗೆದುಕೊಂಡು ಗುಣಮಟ್ಟದ ಆರೋಗ್ಯ ಕೇಂದ್ರದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಗದಿಗೆಮ್ಮ ದೇಸಾಯಿ, ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಸಿದ್ದಮ್ಮನವರ, ಉಪಾಧ್ಯಕ್ಷೆ ಜ್ಯೋತಿ ಕಡೇಮನಿ, ಸದಸ್ಯರಾದ ರೇಷ್ಮಾ ಸರಪಣ್ಣನವರ್, ನಾಗನಗೌಡ ತೋಟದ, ನಾಗರಾಜ ರಾಚಣ್ಣನವರ, ವೀರಪ್ಪ ಬನ್ನಿಹಟ್ಟಿ, ಮುಖಂಡರಾದ ಗುಡ್ಡಪ್ಪ ದೇಸಾಯಿ, ಸುರೇಶ ಯತ್ನಳ್ಳಿ, ವಿಠ್ಠಲಾಚಾರ ಬಡಿಗೇರ, ಜಯಪ್ಪ, ಎಲ್.ಬಿ. ಅಜ್ಜೇರ, ಮಹಾಬಲೇಶ್ವರ ಸ್ವಾಮಿಗಳು, ಸಹಾಯಕ ಇಂಜಿನೀಯರ ಕೆ.ರಾಜಪ್ಪ, ಗುತ್ತಿಗೆದಾರರಾದ ಎನ್.ಜಿ.ಜಾಧವ, ಲೋಕೇಶ ಭರಮಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.