ಬ್ಯಾಡ್ಗಿ

ಮೂಲಭೂತ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ಆಡಳಿತ ಮಂಡಳಿ ವಿಫಲ: ಆರೋಪ

ಮೂಲಭೂತ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ಆಡಳಿತ ಮಂಡಳಿ ವಿಫಲ: ಆರೋಪ

ಬ್ಯಾಡಗಿ 20: ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗ್ರಾಮಸಭೆಯಲ್ಲಿ ಜರುಗಿದೆ.ತಾಲೂಕಿನ ಗುಂಡೇನಹಳ್ಳಿ ಗ್ರಾಪಂ ಕಾರ್ಯಾಲಯದ ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ತೆರಳಲು ದಾರಿಯ ಸಮಸ್ಯೆ, ಕಾಲೋನಿಗಳಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಅಲ್ಲದೇ ವಸತಿ ಯೋಜನೆಯಡಿ ನಿಯಮಾನುಸಾರ ಮನೆಗಳನ್ನು ನಿರ್ಮಿಸಿಕೊಂಡಿದ್ದರೂ ಈವರೆಗೂ ಸರ್ಕಾರದ ಸಹಾಯ ಧನ ಬಂದಿರುವುದಿಲ್ಲ. ಇತ್ತೀಚೆಗೆ ತಾನೆ ನಿರ್ಮಿಸಿಕೊಂಡಿರುವ ಮನೆಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುತ್ತಿರುವ ಸರ್ಕಾರ ಹಿಂದಿನ ವರ್ಷಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ಯಾವ ಉದ್ದೇಶಕ್ಕೆ ಎಂದು ತಿಳಿಯದಾಗಿದೆ. ಗ್ರಾಪಂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಿಡಿಓ ರಹಮತ್ ಬಿ ಮಾತನಾಡಿ, ಈ ಹಿಂದೆ ನಿರ್ಮಿಸಿರುವ ಮನೆಗಳಿಗೆ ಸರ್ಕಾರದ ಸಹಾಯ ಧನ ಬಾರದಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಆದಷ್ಟು ಬೇಗನೆ ಸಹಾಯಧನ ಬಿಡುಗಡೆ ಆಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದರಲ್ಲದೇ, ಗ್ರಾಮದಲ್ಲಿ ಪಂಚಾಯತಿಯಿಂದ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಾವು ಕ್ರಮ ವಹಿಸಿದ್ದು, ಸಾರ್ವಜನಿಕರು ಸಹ ಗ್ರಾಮ ಪಂಚಾಯತಿಗೆ ಸಹಕಾರ ನೀಡಬೇಕು. ಜೊತೆಗೆ ತೆರಿಗೆಗಳನ್ನು ಸಕಾಲಕ್ಕೆ ತುಂಬುವ ಮೂಲಕ ಕರ ವಸೂಲಾತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಪುಟ್ಟವ್ವ ಹರಿಜನ, ಉಪಾಧ್ಯಕ್ಷೆ ಪಾರ್ವತಿ ಶಿಗ್ಗಾವಿ, ಸದಸ್ಯರಾದ ಮಂಜುನಾಥ ಯತ್ನಳ್ಳಿ, ಪರಶುರಾಮ ಚನ್ನಗಿರಿ, ಸೀತವ್ವ ಕಾಟೇನಹಳ್ಳಿ, ಲಲಿತವ್ವ ದೇಶಗತ್ತಿ, ರೇಣವ್ವ ಹಾವನೂರ, ಶಿವಯೋಗಿ ಹುಣಸಿಕಟ್ಟಿ, ಮಾರುತಿ ಲಮಾಣಿ, ಗ್ರಾಪಂ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ