ಅಥಣಿ

ಬಡತನದ ಕುಟುಂಬಗಳಿಗೆ ಆಸರೆಯಾಗುತ್ತಿರುವ ಅಥಣಿ ಗೆಳೆಯರ ಬಳಗ

ಬಡತನದ ಕುಟುಂಬಗಳಿಗೆ ಆಸರೆಯಾಗುತ್ತಿರುವ ಅಥಣಿ ಗೆಳೆಯರ ಬಳಗ
ಉಚಿತ ಅಂತ್ಯಸಂಸ್ಕಾರ ಕಾರ್ಯ ನಡೆಸುತ್ತಿರುವ ಅಥಣಿ ಗೆಳೆಯರ ಬಳಗದ ಸದಸ್ಯರು

ಅಥಣಿ 20: ಕೊರೊನಾ ಮಹಾಮಾರಿ ಮಾನವನ ಸಂಬಂಧಗಳನ್ನು ದೂರಮಾಡಿ ಸಾವಿನ ರಣಕೇಕೆ ಹಾಕುತ್ತಿದ್ದು. ಸೋಂಕಿಗೆ ಒಳಗಾದ ವ್ಯಕ್ತಿಯ ಶವ ಸಂಸ್ಕಾರಕ್ಕೂ ಕುಟುಂಬ ವರ್ಗದವರು ಮುಂದೆ ಬರದ ಸಮಯದಲ್ಲಿ ಅಥಣಿಯಲ್ಲಿ ಗೆಳೆಯರ ಬಳಗ ಉಚಿತವಾಗಿ ಸೋಂಕಿತರ ಶವಸಂಸ್ಕಾರ ನಿರ್ವಹಿಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಥಣಿಯಲ್ಲಿ 'ಅಥಣಿ ಗೆಳೆಯರ ಬಳಗ' ಎಂಬ ಹೆಸರನ್ನಿಟ್ಟುಕೊಂಡು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿದ್ದಾರೆ ಹೌದು ಇಂತಹ ಒಂದು ತಂಡ ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. 

ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣ ಪಡೆದ ಸಾಕಷ್ಟು ಉದಾಹರಣೆಗಳಿಗೆ. ಅಷ್ಟೇ ಏಕೆ ಅತ್ಯಂತ ಅಮಾನವೀಯವಾಗಿ ಕೆಲವರ ಅಂತ್ಯಸಂಸ್ಕಾರ ನೆರವೇರಿಸಿದ ಉದಾಹರಣೆಗಳು ಸಾಕಷ್ಟು ನಮ್ಮ ಕಣ್ಣಮುಂದಿವೆ. ಇಂತಹ ಹಲವಾರು ಘಟನೆಗಳನ್ನು ನೋಡಿದ್ದ ಈ ಅಥಣಿ ಗೆಳೆಯರ ಬಳಗದಲ್ಲಿ ಸುಮಾರು ಹನ್ನೆರೆಡು ಜನ ಸೇರಿಕೊಂಡು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿ ಯಾರಿಂದಲೂ ನಯಾ ಪೈಸೆಯನ್ನು ಅಪೇಕ್ಷಿಸದೇ ತಮ್ಮ ಸ್ವಂತ ಖರ್ಚಿನಿಂದ ಸಾಧ್ಯವಾದಷ್ಟು ವಿಧಿವಿಧಾನಕ್ಕೆ ಬೇಕಾದ ವೆಚ್ಚಗಳನ್ನು ಭರಿಸುತ್ತಿದ್ದಾರೆ. 

ಈ ಅಥಣಿ ಗೆಳೆಯರ ಬಳಗದಲ್ಲಿ ಮಲ್ಲೇಶ ಪಟ್ಟಣ, ಸಿದ್ದು ಮಾಳಿ, ಅರುಣ ಮಾಳಿ, ಪ್ರಶಾಂತ ತೋಡಕರ, ರಶೀದ ಶೇಡಬಾಳೆ, ಮಹಾದೇವ ಅಡಹಳ್ಳಿ, ಜಗನ್ನಾಥ ಬಾಮನೆ, ಆನಂದ ಮಾಕಾಣಿ, ಮಯೂರೇಶ ಮಂಗಸೂಳಿ, ಪ್ರಮೋದ ಚಂಡಕೆ, ಮಲ್ಲೇಶ ಕಾಂಬಳೆ, ಪ್ರಕಾಶ ಜಾಧವ ಅವರನ್ನು ಸೇರಿದಂತೆ 12 ಜನ ಯುವಕರಿದ್ದು ಅವರನ್ನು ಮೆಚ್ಚುವಂತಹದ್ದಾಗಿದೆ. 

ಕೊರೋನಾ ಹಾವಳಿ ಹಾಗೂ ಅದನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕಡೌನ್ ಹಿನ್ನಲೆಯಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದರೆ ಇನ್ನೂ ಕೆಲವರು ಖರ್ಚಿಗೂ ಕಾಸಿಲ್ಲದೆ ಊಟಕ್ಕೂ ಹಣವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಕಡೆ ದಿನಸಿ, ಕಿಟ್, ಪದಾರ್ಥ ಇತ್ಯಾದಿ ರೀತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಹಂಚಿ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದರೆ ಇತ್ತ ಅಥಣಿಯಲ್ಲಿ ಅಥಣಿ ಗೆಳೆಯರ ಬಳಗದ ಸದಸ್ಯರು ಉಚಿತವಾಗಿ ಕೋವಿಡ್‌ನಿಂದ ಮೃರಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿ ಮಾದರಿಯಾಗಿದ್ದಾರೆ. 

ಉಚಿತ ಅಂತ್ಯಸಂಸ್ಕಾರದ ಸಂಪರ್ಕಕ್ಕಾಗಿ - 8546868005 

ನಮ್ಮ ಮನೆಯಲ್ಲಿ ತೀರಿಕೊಂಡಾಗ ಅವರ ಚಿಕಿತ್ಸೆಗೆಂದು ದುಡ್ಡು ಖಾಲಿಯಾಗಿದ್ದಾಗ ಈ ಅಥಣಿ ಗೆಳೆಯರ ಬಳಗದ ಸದಸ್ಯರು ಸ್ವಯಂಪ್ರೇರಿತವಾಗಿ ಬಂದು ಅವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಿಕೊಟ್ಟು ನಮ್ಮ ಕುಟುಂಬಕ್ಕೆ ಮರೆಯಲಾರದಂತಹ ಸಹಾಯ ಮಾಡಿದ್ದಾರೆ ದೇವರ ಆಶಿರ್ವಾದ ಸದಾಕಾಲ ಅವರ ಮೇಲಿರಲಿ- ಮುರುಗೇಶ ಮೋಳೆ

ಅಂತ್ಯಸಂಸ್ಕಾರಕ್ಕೆ ಒಳಪಟ್ಟವರ ಕುಟುಂಬದ ಸದಸ್ಯ

ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕೋವಿಡ್‌ನಿಂದ ಅನೇಕ ಜನ ಮೃತಪಟ್ಟಿದ್ದನ್ನು ಗಮನಿಸಿ, ಸತ್ತವರ ಶವಸಂಸ್ಕಾರ ಗೌರವಯುತವಾಗಿ ನಡೆಯಬೇಕೆಂದು ನಿರ್ಧರಿಸಿ ನಾವು 12 ಜನ ಸ್ವಯಂಪ್ರೇರಿತವಾಗಿ ಸೇರಿಕೊಂಡು ಈ ಕೆಲಸ ಮಾಡುತ್ತಿದ್ದು ಈ ಕೆಲಸ ನಮಗೆ ಹಮ್ಮೆಯನ್ನುಂಟು ಮಾಡಿದೆ- ಮಲ್ಲೇಶ ಪಟ್ಟಣ

ಅಥಣಿ ಗೆಳೆಯರ ಬಳಗದ ಸದಸ್ಯ



ಸುದ್ದಿ ಓದಿ