ಶಿಕ್ಷಕ ದಂಪತಿಯ ಪುತ್ರಿ ರಾಜ್ಯಕ್ಕೆ ಪ್ರಥಮ
ತಾಳಿಕೋಟೆ 10: ತಾಲೂಕಿನ ಪಿರಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ರುದ್ರಯ್ಯ ದಮ್ಮೂರಮಠ, ಮುಕಿಹಾಳ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸುವರ್ಣಾ ದಮ್ಮೂರಮಠ ದಂಪತಿಯ ಪುತ್ರಿಯಾದ ಸಿಂಚನಾ ರುದ್ರಯ್ಯ ದಮ್ಮೂರಮಠ ಎಸ್.ಎಸ್.ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕಿರ್ತಿ ಹೆಚ್ಚಿಸಿದ್ದಾರೆ.
ದಮ್ಮೂರಮಠ ದಂಪತಿಯ ಮೊದಲ ಪುತ್ರಿಯಾದ ಸಿಂಚನಾ ಓದಿನಲ್ಲಿ ಯಾವಾಗಲೂ ಅಗ್ರ ಸ್ಥಾನದಲ್ಲಿ ನಿಲ್ಲುತ್ತಿದ್ದ ಸಿಂಚನಾ ಕೇವಲ 8 ಗಂಟೆ ಅಭ್ಯಾಸ ಮಾಡಿದರೆ ಸಾಕು ಏನನ್ನಾದರೂ ಸಾಧಿಸಬಲ್ಲದು ಸಾದಿಸಿ ತೋರಿಸಿದ್ದಾಳೆ. ಬೆಳಿಗ್ಗೆ 5 ಗಂಟೆಗೆ ಎದ್ದು ಮೊದಲು ಯೋಗ, ಭರತನಾಟ್ಯದ ಹವ್ಯಾಸ ಮಾಡಿ ನಂತರ 8 ಗಂಟೆ ಪ್ರತಿ ನಿತ್ಯ ಅಭ್ಯಾಸ ಮಾಡುತ್ತಿದ್ದಳು. ಓದಿನ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸಹ ಸಕ್ರೀಯವಾಗಿ ತೊಡಗುತ್ತಿದ್ದ ಸಿಂಚನಾ ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿ ಜನರ ಮನಸ್ಸನ್ನು ಗೆದ್ದಿದ್ದಾಳೆ.
ಎಲ್ಕೆಜಿಯಿಂದ 8 ನೇ ತರಗತಿಯವರೆಗೆ ಪಟ್ಟಣದ ವಿಪಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯವರೆಗೆ ಅಭ್ಯಾಸ ಮಾಡಿದ ವಿದ್ಯಾರ್ಥಿನಿ, ನಂತರ ತಾಲೂಕಿನ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಸೇರಿಕೊಂಡಳು. 6ನೇ ತರಗತಿಗೆ ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಪಾಲಕರ ವಸತಿ ಶಾಲೆಗೆ ಕಳಿಸಲು ನಿರಾಕರಿಸಿದ್ದರಿಂದ ಇಲ್ಲಿಯೇ ಶಿಕ್ಷಣ ಮುಂದುವರೆಸಿದ್ದರು. ಓದಿನ ಜೊತೆ ಜೊತೆಗೆ ಹಲವು ಸ್ಪರ್ಧೆಗಳಲ್ಲಿ ಸಕ್ರೀಯಗಾದ್ದ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ, ಎನ್ಟಿಎಸ್ಇ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಳು. ಇದರಿಂದ ಪ್ರೇರಿತವಾದ ಸಿಂಚನಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು ನಿತ್ಯ ಅಭ್ಯಾಸ ಮಾಡುತ್ತಿದ್ದಳು. ಆಪ್ಲೈನ್ ತರಗತಿಗಳು ಕೇವಲ 3 ತಿಂಗಳು ಮಾತ್ರ ನಡೆದರೂ ಸಹ ಆನ್ಲೈನ್ ತರಗತಿಗಳಿಗೂ ಹಾಜರಾಗುತ್ತಿದ್ದಳು. ಪಾಲಕರು ಕಡಾ ಪ್ರೌಢ ಶಾಲೆಯ ಶಿಕ್ಷಕರಾಗಿರುವದರಿಂದ ಮಗಳಿಗೆ ಅಭ್ಯಾಸದಲ್ಲಿ ನಿತ್ಯ ಸಹಕಾರ ನೀಡುತ್ತಿದ್ದರು. ಪಾಲಕರ ಸಹಕಾರ, ಶಾಲೆಯ ಗುರುಗಳ ಅಭ್ಯಾಸ ಮತ್ತು ವಿದ್ಯಾರ್ಥಿನಿಯ ಶ್ರಮಕ್ಕೆ ಸಿಂಚನಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.