ಚಿಕ್ಕೋಡಿ

ರಾಷ್ಟ್ರೀಯ ಲೋಕ ಅದಾಲತ್‌ನ ಲಾಭ ಪಡೆದುಕೊಳ್ಳಿ: ನ್ಯಾ. ಚೌವ್ಹಾಣ

ರಾಷ್ಟ್ರೀಯ ಲೋಕ ಅದಾಲತ್‌ನ ಲಾಭ ಪಡೆದುಕೊಳ್ಳಿ: ನ್ಯಾ. ಚೌವ್ಹಾಣ

ಚಿಕ್ಕೋಡಿ 12: ಕಾನೂನು ಪ್ರಕಾರ ರಾಜೀಗೆ ಅರ್ಹ ಇರುವ ಪ್ರಕರಣವನ್ನು ಇತ್ಯರ್ಥಗೊಳಿಸಲು ಜುಲೈ 8ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಜನತಾ ನ್ಯಾಯಾಲಯದಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್‌.ಎಲ್‌.ಚೌವ್ಹಾಣ ತಿಳಿಸಿದರು. 

ಇಲ್ಲಿನ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಲಯದಲ್ಲಿ ಅನೇಕ ವರ್ಷಗಳಿಂದ ಪೆಂಡಿಂಗ ಇರುವ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಒಳ್ಳೆಯ ಅವಕಾಶ ನೀಡಿದೆ. ಆಸಕ್ತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು. 

ಜುಲೈ 8 ರಂದು ಬೃಹತ್ ಲೋಕ ಅದಾಲತ್ ನಡೆಯಲಿದೆ. ಆದರೆ ಸೋಮವಾರ ದಿ.12 ರಿಂದ ಜುಲೈ 8ರವರೆಗೆ ಪ್ರತಿದಿನ ಸಂಜೆ 4.30 ರಿಂದ 5.30 ರವರೆಗೆ ಜನತಾ ನ್ಯಾಯಾಲಯ ನಡೆಯಲಿದೆ. ಈ ಜನತಾ ನ್ಯಾಯಾಲಯಕ್ಕೆ ನ್ಯಾಯವಾದಿಗಳ ಸಹಕಾರ ಮುಖ್ಯವಾಗಿದೆ. ಅವರಿಂದ ಇಲ್ಲಿಯವರಿಗೆ ಸಹಕಾರ ಕೊಟ್ಟಿದ್ದಾರೆ ಮುಂದೆಯು ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಜನತಾ ನ್ಯಾಯಾಲಯದಲ್ಲಿ ಬರುವ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಹೆಚ್ಚಾಗಿ ನ್ಯಾಯಾವಾದಿಗಳು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. 

ಕೇವಲ ನ್ಯಾಯಾಲಯದಲ್ಲಿ ಇರುವ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವದಷ್ಟೇ ಅಲ್ಲದೆ ಹೊರಗಿನವರು ತಮ್ಮ ಏನಾದರೂ ವ್ಯಾಜ್ಯ ಇದ್ದರೆ ಲೋಕ ಅದಾಲತ್‌ದಲ್ಲಿ ಪಾಲ್ಗೊಂಡು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಚೆಕ್ ಬೋನ್ಸ್‌, ಬ್ಯಾಂಕ ವ್ಯವಹಾರ, ಗಂಡ ಹೆಂಡತಿಯರ ರಾಜೀ ಸಂಧಾನ, ರಸ್ತೆ ಅಪಘಾತ ಹೀಗೆ ಹತ್ತು ಹಲವು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಒಮ್ಮೆ ಜನತಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಮುಂದಿನ ಯಾವ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಇರುವುದಿಲ್ಲ ಎಂದರು. 

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಹರೀಶ ಪಾಟೀಲ, ಚಿದಾನಂದ ಬಡಿಗೇರ, ಅಶೋಕ ಆರ್‌. ಎಚ್,  ನಾಗೇಶ ಪಾಟೀಲ, ಸರಕಾರಿ ಅಭಿಯೋಜಕ ಆರ್‌.ಐ.ಖೋತ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎನ್‌.ಪಾಟೀಲ, ಕಾರ್ಯದರ್ಶಿ ಎಸ್‌.ಆರ್‌.ವಾಲಿ ಮುಂತಾದವರು ಇದ್ದರು. 


ಸುದ್ದಿ ಓದಿ