ಬಡ ಯುವತಿಯರಿಗೆ ಟೈಲರಿಂಗ್ ಪ್ಯಾಶನ್ ಡಿಜೈನಿಂಗ್ ಕೌಶಲ್ಯ ತರಬೇತಿ
ಲೋಕದರ್ಶನ ವರದಿ
ರಾಣಿಬೆನ್ನೂರ 23: ಶಿಕ್ಷಣ ವ್ಯವಸ್ಥೆ, ಸಮುದಾಯ ವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಇವುಗಳನ್ನು ನಾನು ಉತ್ತರ ಕರ್ನಾಟಕದ ಭಾಗದಲ್ಲಿ ನೋಡಿ ಅಧ್ಯಯನ ಮಾಡಿದ್ದೆ. ವನಸಿರಿ ಸಂಸ್ಥೆಯು ಕೆಲಸ ಮಾಡುವ ಕಾರ್ಯಾಕ್ಷೇತ್ರದಲ್ಲಿ ಕಟ್ಟಕಡೆಯ ಸಮುದಾಯಕ್ಕೆ ಸಹಕಾರಿಯಾಗಿ ಕೆಲಸ ಮಾಡಲು ಸಂತೋಷವಾಗುತ್ತದೆ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಶಿಕ್ಷಣವನ್ನು ಪಡೆಯಲು ಮಹಿಳೆಯರು ಮುಂದಾಗಬೇಕು ಎಂದು ಬೆಂಗಳೂರು ಟಿಡಿಎಚ್ ಸಂಸ್ಥೆಯ ಉಪ ವಲಯ ಸಂಯೋಜಕ ಪಿ.ಇ. ರೆಜಿ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಟಿ.ಡಿ.ಎಚ್. ಸಂಸ್ಥೆ ಬೆಂಗಳೂರು ಇವರ ನೆರವಿನೊಂದಿಗೆ ಸ್ಥಳೀಯ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ಕೊಳೆಚೆ ಪ್ರದೇಶದ ಬಡ ಯುವತಿಯರಿಗೆ ಟೈಲರಿಂಗ್ ಪ್ಯಾಶನ್ ಡಿಜೈನಿಂಗ್ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತಾಡಿದ ಅವರು, ಶಿಕ್ಷಣದ ಮೂಲಕ ಸಮಾಜದ ಅಸಮಾನತೆ ಬದಲಾವಣೆ ಮಾಡಲು ಸಾಧ್ಯ ಎಂದರು.
ಶಿಕ್ಷಣವೆಂಬುದು ಸರ್ಕಾರಿ ನೌಕರಿ ಪಡೆಯುವುದು ಅಷ್ಟೇ ಅಲ್ಲ ಈಗಿನ ಶಿಕ್ಷಣ ವ್ಯವಸ್ಥೆ, ಜಾತಿ ವ್ಯವಸ್ಥೆ ಹರಿದು ಹಂಚಿ ಹೋಗಿದೆ ಅವುಗಳನ್ನು ಒಟ್ಟುಗೂಡಿಸಲು, ದೇಶ ಕಟ್ಟಲು ಶಿಕ್ಷಣವೇ ಮುಖ್ಯವಾಗಿದೆ. ಸಂಸ್ಥೆಯ ನೆರವಿನಿಂದ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಹಾಗೂ ಮಹಿಳೆಯರು ಟೈಲರಿಂಗ್ ತರಬೇತಿ ಪಡೆದು ತಮ್ಮ ಭವಿಷ್ಯ ರೂಪಿಸಿಕೊಂಡು ಇತರರಿಗೆ ಮಾದರಿಯಾಗೇಕು ಎಂದರು.
ಜಿಲ್ಲಾ ವಕ್ಫ ಮಂಡಳಿಯ ಅಧ್ಯಕ್ಷ ಸಲೀಂ ಜವಳಿ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಸುಂದರ ಜೀವನಕ್ಕೆ ವೇದಿಕೆಯಾದ ಹಾಗೂ ಅಸಂಘಟಿತ ಕಾರ್ಮಿಕರ ಏಳ್ಗೆಗಾಗಿ ಶ್ರಮಿಸುವ ವನಸಿರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಬಸವರಾಜ ಭೋವಿ ಮಾತನಾಡಿ, ವನಸಿರಿ ಸಂಸ್ಥೆಯು ಲೇಬರ್ ಬ್ಯಾಂಕ ಮೂಲಕ ಕಾರ್ಮಿಕರಿಗೆ ಕೆಲಸ ನೀಡುವುದು, ಜಲಾನಯನ. ಬದು ನಿರ್ಮಾಣದ ಮೂಲಕ ರೈತರ ಜಮೀನುಗಳಲ್ಲಿ ಮಣ್ಣಿನ ಸವಕಳಿ, ನೀರಿನ ಸಂರಕ್ಷಣೆಯ ಅನೇಕ ಯೋಜನೆಗಳ ಮೂಲಕ ರೈತರಿಗೆ ಆಸರೆಯಾಗಿದ್ದಾರೆ ಅಷ್ಟೇ ಅಲ್ಲದೆ ರೈತ ಕಾರ್ಮಿಕ ಮಕ್ಕಳಿಗೆ ಶಿಕ್ಷಣಕ್ಕೂ ಅತ್ಯಂತ ಸಹಕಾರಿಯಾಗಿದೆಎಂದರು.
ವನಸಿರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಪ್ರಾಸ್ತವಿಕವಾಗಿ ಮಾತನಾಡಿದರು. ವನಸಿರಿ ಸಂಸ್ಥೆಯ ಖಜಾಂಚಿ ಹಬೀಬ್ಬಾನು ಹಾನಗಲ, ಮಲ್ಲಮ್ಮ, ಜಿ.ಪಿ. ನದಾಫ್, ತರಬೇತಿ ಪಡೆದ ಮಹಿಳೆಯರು ಇದ್ದರು.