ಬಡತನ ನಿರ್ಮೂಲನೆ ಕಾರ್ಯ ಯೋಜನೆ ಅನುಷ್ಠಾನಕ್ಕೆ ಕಾನೂನು ಸೇವಾ ಪ್ರಾಧಿಕಾರ ಸಿದ್ಧತೆ- ಟಿ.ಗೋವಿಂದಯ್ಯ
ಕಾರವಾರ 16: ಪ್ರತಿಯೊಂದು ಇಲಾಖೆಯಲ್ಲಿಯೂ ಬಡವರಿಗಾಗಿ ಸರ್ಕಾರದ ಸಾಕಷ್ಟು ಅನುದಾನಗಳು ಬರುತ್ತವೆ ಆದರೆ ಅವುಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಆದ್ದರಿಂದ ಸರಕಾರದ ಸವಲತ್ತುಗಳ ಹಾಗೂ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ಅಭಿಪ್ರಾಯಪಟ್ಟರು.
ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಬಡತನ ನಿರ್ಮೂಲನೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದರು. ಇಂದಿಗೂ ಕೂಡಾ ಗ್ರಾಮೀಣ ಭಾಗದಲ್ಲಿ ಸೋಗೆಗರಿ, ತಗಡಿನ ಟೆಂಟುಗಳಲ್ಲಿ ವಾಸಿಸುವ ಜನರಿದ್ದಾರೆ. ಇಂತಹ ಅರ್ಹ ಫಲಾನುಭವಿಗಳನ್ನ ಹುಡುಕಿ ವಿವಿಧ ಇಲಾಖೆಗಳ ವಿವಿಧ ಯೋಜನೆಯಗಳ ಫಲ ದೊರೆಕಿಸುದು, ಅಂಗವಿಕಲರಿಗೆ, ಮನೆ ಇಲ್ಲದವರಿಗೆ ಅವುಗಳನ್ನ ಅವರು ಹೇಗೆ ಪಡೆಯಬೇಕೆಂಬ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ, ಜನಸಾಮಾನ್ಯರನ್ನ ಲಂಚ, ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯಲ್ಲಿಯೂ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು ರಾಜ್ಯದ ಮೇಲ್ವಿಚಾರಕರಾಗಿ ನಿವೃತ್ತ ನ್ಯಾಯಾಧೀಶ ವೇಣುಗೋಪಾಲ ಗೌಡ ಅವರನ್ನ ಹೈಕೋರ್ಟ್ ನೇಮಿಸಿದ್ದು, ಜಿಲ್ಲೆಯಲ್ಲಿ ಅಪರ ಜಿಲ್ಲಾ ನ್ಯಾಯಾಧೀಶ ಬಿ.ಗಣೇಶ್ ಅವರನ್ನ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 86 ಸ್ವಯಂ ಸೇವಕರನ್ನ ನೇಮಿಸಲಾಗಿದ್ದು ಗ್ರಾಮಪಂಚಾಯತಿ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯದಿಂದ ಸರ್ವೆ ನಡೆಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ದೊರಕಿಸಲಾಗುವುದು ಎಂದರು.