ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ವಿಶ್ವಕ್ಕೆ ಮಾದರಿ: ಟೊಣಪಿ
ಅಥಣಿ 12: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನ, ಸಾಧನೆ, ಆಧ್ಯಾತ್ಮ ಕೇವಲ ಭಾರತದ ಯುವಕರಿಗೆ ಮಾತ್ರ ಅಲ್ಲ ವಿಶ್ವದ ಯುವಕರಿಗೂ ಮಾದರಿಯಾಗಿದೆ ಎಂದು ಬಿಜೆಪಿ ಧುರೀಣ ಆನಂದ ಟೊಣಪಿ ಹೇಳಿದರು.
ಅವರು ಅಜೇಯ ಚೇತನ ನಗರ ಹಾಗೂ ಗ್ರಾಮೀಣ ಸಂಘ ಹಾಗೂ ಅಜೇಯ ಚೇತನ ವಿವಿದೊದ್ಧೇಶಗಳ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದಿನ ಪಶ್ಚಿಮ ಬಂಗಾಳದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರ ಮೊದಲ ಹೆಸರು ನರೇಂದ್ರ ದತ್ತ. ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು ಹೊಂದಿದ್ದ ನರೇಂದ್ರ ದಕ್ಷಿಣೇಶ್ವರದಲ್ಲಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯತ್ವವನ್ನು ಸ್ವೀಕರಿಸಿ ವಿವೇಕಾನಂದ ಹೆಸರಿನಿಂದ ಪ್ರಸಿದ್ಧಿಯಾದರು ಎಂದು ಹೇಳಿದರು.
ವಿವೇಕಾನಂದರು ಸನ್ಯಾಸತ್ವ ಸ್ವೀಕರಿಸಿದ ನಂತರ ಕೇವಲ ಒಂದು ಮಠ ಅಥವಾ ಪೀಠಕ್ಕೆ ಸೀಮಿತರಾಗದೇ ಹಿಂದು ಧರ್ಮದ ಏಳಿಗೆಗಾಗಿ, ಭಾರತೀಯ ಸಂಸ್ಕೃತಿಯ ಉನ್ನತಿಗಾಗಿ ತನ್ನ ಜೀವನವನ್ನೇ ಮೀಸಲಿಟ್ಟರು. ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾದರು. ಕೇವಲ 39 ವರ್ಷಗಳ ಅಲ್ಪ ಅವಧಿಯಲ್ಲಿಯೇ ವಿಶ್ವ ಮೆಚ್ಚುವಂತೆ ಕಾರ್ಯ ಮಾಡಿದ ವಿವೇಕಾನಂದರನ್ನು ಅಧ್ಯಯನ ಮಾಡುವುದು ಎಂದರೆ ಭಾರತವನ್ನು ಅರ್ಥ ಮಾಡಿಕೊಂಡಂತೆ ಅವರ ಆದರ್ಶ ಕಾರ್ಯಗಳು ನಮಗೆಲ್ಲ ಮಾದರಿಯಾಗಿದೆ ಎಂದರು.
ನ್ಯಾಯವಾದಿ ಸಂಜೀವ ಚಟ್ಟರಕಿ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ಇಂದಿನ ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ನಾವೇಲ್ಲ ಸೇರಿ ಮಾಡಬೇಕಿದೆ ಎಂದರು.
ಅಭಯ ಪಾಟೀಲ, ಅಜೀತ ಇಮಾಮದಾರ, ರಾಜು ಓಂಕಾರ, ಅನೀಲ ಕುಲಕರ್ಣಿ, ರಾಜು ಗುಡೋಡಗಿ, ಮಕರಂದ ನಾಯಿಕ, ಸಂತೋಷ ಲಠ್ಠೆ, ಪಿಂಟು ಪೂಜಾರಿ, ಬಾಲಾಜಿ ಪಾಟೀಲ, ಪ್ರಭು ದಲಾಲ, ಮಿಲಿಂದ ತಬೀಬ, ಕಿರಣ ದೇಶಪಾಂಡೆ, ಸುನೀಲ ದೇಸಾಯಿ, ಶ್ರೀನಾಥ ದೇಶಪಾಂಡೆ, ಸಂದೀಪ ಅಳತೇಕರ, ಭೈಯ್ಯಾ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.