ಅಥಣಿ

ಮನೆ ಮನೆಗೆ ತೆರಳಿ ಕೋವಿಡ್‌ನಿಂದ ಮೃತ ಪಟ್ಟವರ ಸರ್ವೇ: ಚಿಂಗಳೆ

ಮನೆ ಮನೆಗೆ ತೆರಳಿ ಕೋವಿಡ್‌ನಿಂದ ಮೃತ ಪಟ್ಟವರ ಸರ್ವೇ: ಚಿಂಗಳೆ

ಅಥಣಿ 14: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಕೊವೀಡ್ ಸಂದರ್ಭದಲ್ಲಿ ಮೃತ ಪಟ್ಟವರ ಸಂಖ್ಯೆಯನ್ನು ಬಹಿರಂಗ ಪಡೆಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ, ಪದಾಧಿಕಾರಿಗಳ, ಚುನಾಯಿತ ಪ್ರತಿನಿಧಿ, ಮುಖಂಡರ ಮೂಲಕ ಮಹಾನಗರ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಸರ್ವೇ ನಡೆಸಿ ಮೃತ ಪಟ್ಟವರ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳುವ ಕಾರ್ಯ ಇಷ್ಟರಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.  

ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  ಕೊವೀಡ್ ಸಾಂಕ್ರಾಮಿಕ ರೋಗದಿಂದ ಲಕ್ಷಾಂತರ ಜನ ಮೃತಪಟ್ಟಿದ್ದರೂ ಕೂಡ ರಾಜ್ಯ ಸರಕಾರ ಮಾತ್ರ ಇಲ್ಲಿಯವರೆಗೂ ಸಾವಿರ ಲೆಕ್ಕದಲ್ಲಿಯೇ ತನ್ನ ದಾಖಲೆಯಲ್ಲಿ ತೋರಿಸುತ್ತಿದೆ. ಇತ್ತೀಚಿಗೆ ರಾಜ್ಯದ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳು ಕೊವೀಡ್ ದಿಂದ ಮೃತಪಟ್ಟ ಕುಟುಂಬಗಳಿಗೆ ಒದಗಿಸಬಹುದು ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಕೂಡ ಕೊವೀಡ್ ದಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ ಆದರೆ ಮೃತಪಟ್ಟವರ ಸಂಖ್ಯೆಯೇ ರಾಜ್ಯ ಸರಕಾರದ ಬಳಿ ಇಲ್ಲ ಹೀಗಾಗಿ ಪರಿಹಾರ ಯಾರಿಗೆ ಎನ್ನುವ ಪ್ರಶ್ನೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತಕ್ಷಣ ಸರ್ವೇ ಕಾರ್ಯ ಪೂರ್ಣಗೊಳಿಸಿ ಕೆಪಿಸಿಸಿ ಮೂಲಕ ರಾಜ್ಯ ಸರಕಾರಕ್ಕೆ ವರದಿ ನೀಡಲಾಗುವುದು ಎಂದ ಅವರು ಈ ವರದಿ ಅನ್ವಯವೇ ಸರಕಾರ ಪರಿಹಾರ ಕೊಡಬೇಕು ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.  

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಕೊವೀಡ್ ರೋಗದ ತೀವೃತೆ ಹೆಚ್ಚಾಗಿದೆ ಇದರ ಪರಿಣಾಮ ನಮ್ಮ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ಇಡಬೇಕು ಮತ್ತು ನೆಗೆಟಿವ್ ವರದಿ ಕಡ್ಡಾಯಗೊಳಿಸಬೇಕು ಮತ್ತು ಚೆಕ್ಕ ಪೊಸ್ಟಗಳಲ್ಲಿ ತಪಾಸಣೆ ನಡೆಸಬೇಕು ಎಂದ ಅವರು ಕೊವೀಡ್ ರೋಗದ ಈ ಸಂಕಷ್ಟದ ಸಮಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಪಡಿಸಿದಂತೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳನ್ನೂ ಸಹ ರದ್ದು ಪಡಿಸಬೇಕಿತ್ತು ಆದರೆ ಶಿಕ್ಷಣ ಸಚಿವರು ಮಾತ್ರ ಯಾರ ಮಾತಿಗೂ ಬೆಲೆ ಕೊಡದೇ ಹತ್ತನೆ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವುದು ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ಆತಂಕ ಸೃಷ್ಟಿಸಿದೆ ಎಂದರು.  

ಬಿಜೆಪಿ ಸರಕಾರದ ಆಡಳಿತ ವೈಖರಿ ಎಲ್ಲದರಲ್ಲೂ ಜನರ ವಿಶ್ವಾಸ ಕಳೆದುಕೊಂಡಿದೆ ಅನೇಕ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದರೂ ಕೂಡ ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಸಚಿವರಲ್ಲಿ ಸರಿಯಾದ ಹೊಂದಾಣಿಕೆ ಇಲ್ಲ ಹೀಗಾಗಿ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಮಾಜಿ ಸಿಎಮ್ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಧ್ಯೆ ಯಾವುದೇ ಭಿನ್ನ ಅಭಿಪ್ರಾಯಗಳಿಲ್ಲ ಮುಂಬರುವ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿಯೇ ನಡೆಯಲಿದ್ದು, ಚುನಾವಣೆ ನಂತರ ಕಾಂಗ್ರೆಸ್ ಹೈ ಕಮಾಂಡ ಮುಂದಿನ ಸಿಎಮ್ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.  

ಮುಖಂಡರಾದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸುರೇಶ ಪಾಟೀಲ, ಬಸವರಾಜ ಬುಟಾಳಿ, ರಾಜು ಜಮಖಂಡಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ