ಆಗಸ್ಟ್‌ 8ರಿಂದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಆಗಸ್ಟ್‌ 8ರಿಂದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಲೋಕದರ್ಶನ ವರದಿ 

 ಕಲಬುರಗಿ, ಆ.5: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಯುವ ಚಿತ್ರಕಲಾವಿದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಗಸ್ಟ್‌ 8ರಿಂದ 12ರವರೆಗೆ ನಗರದ ರಾಮಮಂದಿರ ಹಿಂಭಾಗದಲ್ಲಿರುವ ಬಿಸಿಲು ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.  

ಪ್ರದರ್ಶನವನ್ನು ಆಗಸ್ಟ್‌ 8ರಂದು ಸಂಜೆ 5 ಗಂಟೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ ಉದ್ಘಾಟಿಸಲಿದ್ದಾರೆ. ಚಿತ್ರಕಲಾವಿದ ಸೂರ್ಯಕಾಂತ ನಂದೂರ ಅವರು ಸುರೇಶ್ ಅವರ ಕಲಾಕೃತಿಗಳನ್ನು ಪರಿಚಯಿಸಲಿದ್ದಾರೆ.  

ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ-ಶಿಲ್ಪಕಲಾವಿದ ಬಾಬುರಾವ್ ಎಚ್‌. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಎ. ನಾಸಿ ವಿಶೇಷ ಅತಿಥಿಯಾಗಿರುತ್ತಾರೆ. ಹಿರಿಯ ಚಿತ್ರಕಲಾವಿದ ಹಾಗೂ ಬಿಸಿಲು ಆರ್ಟ್‌ ಗ್ಯಾಲರಿಯ ಮುಖ್ಯಸ್ಥ ವಿ. ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ.  

ಪ್ರದರ್ಶನದಲ್ಲಿ ಸುರೇಶ್ ಅವರು ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ 15ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ 10ಕ್ಕೂ ಹೆಚ್ಚು ಚಿತ್ರಕಲಾ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿದ್ದಾರೆ.  

ಚಿತ್ರಕಲೆಯಲ್ಲಿ ವಿಶೇಷ ಪರಿಣತಿ ಡಿಪ್ಲೊಮಾ ಪಡೆದಿರುವ ಸುರೇಶ್ ಅವರು ಕಲಬುರಗಿ ಕಲಾ ಮಹೋತ್ಸವ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಗದಗಿನ ವಿಜಯ ಕಲಾ ಮಂದಿರದ ಅಮೃತ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. 


ಸುದ್ದಿ ಓದಿ