ಕಬ್ಬು ಬೆಳೆಗಾರರು ಆಧುನಿಕ ಪದ್ಧತಿಯಿಂದ ಅಧಿಕ ಲಾಭ ಪಡೆಯಲು ಸಾಧ್ಯ: ಗಣಪತರಾವ
ಮಾಂಜರಿ 28: ಕಬ್ಬು ಬೆಳೆ ಬೆಳೆಯುವ ರೈತರು ಹಳೆಯ ಪದ್ಧತಿಗಳನ್ನು ಬದಲಾಯಿಸಿ ಹೊಸ ಹೊಸ ತಳಿಗಳನ್ನು ಗುರುತಿಸಿ ಕಡಿಮೆ ವೆಚ್ಚದಲ್ಲಿ ಅಧಿಕ ಬೆಳೆ ಬೆಳೆದು ಲಾಭ ಪಡೆಯಿರಿ, ಒಂದು ಏಕರೆ ಕ್ಷೇತ್ರದಲ್ಲಿ ರೈತ 150 ಟನ್ ಕಬ್ಬು ಬೆಳೆಯಲು ಸಾಧ್ಯವಿದೆ ಎಂದು ಕೃಷಿ ಪಂಡಿತ ಹಾಗೂ ದತ್ತ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಗಣಪತರಾವ ಪಾಟೀಲ ಸಲಹೆ ನೀಡಿದರು.
ಶನಿವಾರದಂದು ಚಿಕ್ಕೋಡಿ ತಾಲೂಕಿನ ಇಂಗಳಿ ಪಿಕೆಪಿಎಸ್ ಸಂಸ್ಥೆ ಮತ್ತು ದತ್ತ ಸಕ್ಕರೆ ಕಾರ್ಖಾನೆಯ ಸಂಯೋಗದಲ್ಲಿ ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಸಲಾಭವನದಲ್ಲಿ ಸಕ್ಕರೆ ಕಾರ್ಖಾನೆಯ ರೈತ ಸದಸ್ಯರಿಗೆ ಕಬ್ಬು ಬೆಳೆ ಬಗ್ಗೆ ವಿಶೇಷ ಮಾಹಿತಿ ನೀಡುವ ರೈತರ ಸಮಾವೇಶ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದತ್ತ ಸಕ್ಕರೆ ಕಾರ್ಖಾನೆ ಎಲ್ಲ ಸದಸ್ಯರ ಕಬ್ಬು ಬೆಳೆಯ ಪ್ರಗತಿ ಬಗ್ಗೆ ವಿಶೇಷ ಪ್ರಯತ್ನಿಸುತ್ತಿದ್ದು ಸಕ್ಕರೆ ಕಾರ್ಖಾನೆಯ ತಜ್ಞರಿಂದ ಬೇಸಾಯಕ್ಕಾಗಿ ಬಳಸುವ ನೀರು, ಮಣ್ಣು, ಕಬ್ಬಿನ ಎಲೆ, ತಪಾಸಣೆ ಮಾಡು ಮುಖಾಂತರ ಅವಶ್ಯಕತೆ ಇರುವ ಗೊಬ್ಬರಗಳು, ನೀರಿನ ಪ್ರಮಾಣದ ಬಗ್ಗೆ ಮಾಹಿತಿ ನೀಡುವುದು ಈ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ ಪ್ರತಿಯೊಬ್ಬ ರೈತ ಒಂದು ಎಕರೆ ಕ್ಷೇತ್ರದಲ್ಲಿ ನೂರಕ್ಕಿಂತ ಅಧಿಕ ಟನ ಕಬ್ಬು ಬೆಳೆಯುವ ವ್ಯವಸ್ಥೆ ಮಾಡಲಾಗಿದೆ ಇದರ ಲಾಭ ತೆಗೆದುಕೊಳ್ಳಬೇಕೆಂದು ಹೇಳಿದರು.
ಪುಣೆಯ ವಸಂತದಾದಾ ಶುಗರ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಕಬ್ಬು ಬೆಳೆ ಶಾಸ್ತ್ರಜ್ಞ ಡಾ. ಪ್ರೀತಿ ದೇಶಮುಖ್ ಇವರು ಮಾರ್ಗದರ್ಶನ ನೀಡುವಾಗ ಯುವ ರೈತರು ಬೇಸಾಯ ಮಾಡುವಾಗ ಪ್ರಥಮ ಮಣ್ಣು ಪರೀಕ್ಷೆ ಮಾಡೋದು ಆಗುತ್ತೆ. ಬೆಳೆಗೆ ಯಾವ ಗೊಬ್ಬರವನ್ನು ನೀಡಬೇಕು,ಎಷ್ಟು ಪ್ರಮಾಣ ಇರಬೇಕು ಈ ಬಗ್ಗೆ ಮಾಹಿತಿ ಪಡೆದು ಹೊಸ ತಳಿಗಳ ನಾಟಿ ಮಾಡಿ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತೆಗೆದುಕೊಳ್ಳಲು ಸಾಧ್ಯವಿದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಓಷಧಗಳು, ಗೊಬ್ಬರಗಳು ಮಾರಾಟ ಮಾಡಲು ಕಂಪನಿಗಳು ಮುಂದೆ ಬಂದಿದ್ದು ರೈತರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ನಿಮ್ಮ ಗದ್ದೆಯಲ್ಲಿ ಹಸಿರು ಗೊಬ್ಬರ ನಿರ್ಮಿಸಿ, ಮಿತವಾಗಿ ನೀರು ಬಳಿಸಿ ಕಬ್ಬು ಬೆಳೆ ಬೆಳೆಯಬೇಕೆಂದು ಮಾರ್ಗದರ್ಶನ ನೀಡಿದರು.
ಪುಣೆಯ ವಸಂತದಾದಾ ಶುಗರ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಕೃಷಿ ಶಾಸ್ತ್ರಜ್ಞ ತುಷಾರ್ ಶಿತೊಳೆ ಇವರು ರೈತರಿಗೆ ಕಬ್ಬಿನ ಸಸಿಗಳ ಬಗ್ಗೆ ವಿಶೇಷ ಮಾಹಿತಿ ನೀಡಿ ಅವರಲ್ಲಿ ಪ್ರೋತ್ಸಾಹ ತುಂಬಿದರು. ಶಿರಗುಪ್ಪಿ ಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಸದಲಗಾ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನವರ್ ಮಾತನಾಡಿ ದತ್ತ ಸಕ್ಕರೆ ಕಾರ್ಖಾನೆ ರೈತರಿಗಾಗಿ ತೆಗೆದುಕೊಂಡ ವಿಶೇಷ ಯೋಜನೆಗಳನ್ನು ಬಳಸಿ ರೈತರು ಅಧಿಕ ಇಳುವರಿ ಪಡೆದು ಲಾಭದಾಯಕ ಕೃಷಿ ಮಾಡಿರಿ ಎಂದು ಹೇಳಿದರು.
ಕೃಷಿ ಪಂಡಿತ ಗಣಪತರಾವ ಪಾಟೀಲ ಇವರನ್ನು ಮಹಾರಾಷ್ಟ್ರ ಸರ್ಕಾರ ಕೃಷಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ ನಿಮಿತ್ಯ ಸಮಾರಂಭದಲ್ಲಿ ರೈತರ ಮುಖಂಡರು ಅಭಿನಂದಿಸಿದರು.
ಕಾರ್ಯಕ್ರಮಕ್ಕೆ ದತ್ತ್ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಘುನಾಥ್ ರಾವ್ ಪಾಟೀಲ್ ಉಪಾಧ್ಯಕ್ಷ ಶರದ ಚಂದ್ರ ಪಾಠಕ ನಿರ್ದೇಶಕರಾದ ಅಮರ್ ಯಾದವ್, ಇಂದ್ರಜಿತ್ ಪಾಟೀಲ್, ಜ್ಯೋತಿ ಕುಮಾರ್ ಪಾಟೀಲ್ ಹಾಗೂ ದತ್ತ ಸಕ್ಕರೆ ಕಾರ್ಖಾನೆಯ ಕೃಷಿ ತಜ್ಞ ಅರುಣ ಎ ಎಸ ಪಾಟೀಲ, ಶ್ರೀಶೈಲ ಹೆಗ್ಗಾನಿ, ಎಂ ವಿ ಪಾಟೀಲ, ಹಾಗೂ ಮಾಂಜರಿ ಚಂದುರ್ ಇಂಗಳಿ ಗ್ರಾಮದ ಕಬ್ಬು ಬೆಳೆಯ ರೈತರು ಹಾಗೂ ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಇಂಗಳಿ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ್ ಮಾನೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.