ಶಾಲೆಗೆ ಹೋಗಲು ಬಸ್ ಕಾಯುತ್ತಿರುವ ವಿದ್ಯಾರ್ಥಿಗಳು ಖಾಸಗಿ ವಾಹನದ ಮೊರೆ
ಯರಗಟ್ಟಿ 07: ಶಾಲೆ-ಕಾಲೇಜಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ. ಆದರೆ ಇಲ್ಲಿ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಶಕ್ತಿ ನಮಗಿಲ್ಲ. ಇದು ಸಮೀಪದ ಯರಗಣವಿ ಗ್ರಾಮದ ನೂರಾರು ಮಕ್ಕಳಿಂದ ಕೇಳಿ ಬಂದ ಅಳಲು.
ಶಾಲಾ ಕಾಲೇಜಿಗೆ ಮಕ್ಕಳು ತೆರಳಲು ಆರಂಭಿಸಿದ್ದಾರೆ. ಶಾಲಾರಂಭ ಆಗುತ್ತಿದ್ದಂತೆ ಸಂಚಾರ ವ್ಯವಸ್ಥೆಯಲ್ಲಿನ ತಾಪತ್ರಯಗಳು ಎಲ್ಲೆಡೆಯಿಂದ ಕೇಳಿ ಬರುತ್ತಿವೆ. ಸಂಚಾರ ಸಮಸ್ಯೆ ನಿವಾರಿಸಿ ಎಂದು ಮಕ್ಕಳು ಗೋಳು ತೋಡಿಕೊಂಡಿದ್ದಾರೆ.
ಈಗ ಶಕ್ತಿ ಯೋಜನೆಯಿಂದ ಬಸ್ ಸಂಚಾರ ಮಾಡುವುದು ಕಷ್ಟವಾಗಿದೆ. ದಿನನಿತ್ಯ ನೂರಾರು ಮಹಿಳೆಯರು ಉಚಿತ ಬಸ್ ಪ್ರಯಾಣ ಬೆಳೆಸಿರುವ ಹಿನ್ನೆಲೆ ಶಾಲಾ ಮಕ್ಕಳು ಹತ್ತಲು ನೂಕುನುಗ್ಗಲು ಉಂಟಾಗುತ್ತದೆ ಹಾಗೂ ಮನೆಯಲ್ಲಿ ಖಾಸಗಿ ವಾಹನಕ್ಕೆ ಹಣ ಕೇಳಿದರೆ ಆಧಾರ್ ಕಾರ್ಡ್ ತೋರಿಸು ಉಚಿತ ಪ್ರಯಾಣ ಮಾಡು ಅಂತ ಹೇಳುತ್ತಾರೆ ಇದರಿಂದ ನಮ್ಮಗೆ ತೊಂದರೆ ಆಗುತ್ತಿದೆ ಎಂದು ಮಕ್ಕಳು ಅಳಲು ತೋಡಿಕೊಂಡರು.
ನಾವು ನಿತ್ಯ ನೂರಾರು ವಿದ್ಯಾರ್ಥಿಗಳು ಖಾಸಗಿ ವಾಹನಕ್ಕೆ ಕೈ ಮಾಡಿ ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಆದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಶಾಲಾ ಮಕ್ಕಳು ಕೇಳಿದರು.