ತಾಳಿಕೋಟಿ

ಪ್ರಾಥಮಿಕ ಶಾಲೆಗೆ ಶಿಕ್ಷಕರ ನಿಯೋಜಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಾಥಮಿಕ ಶಾಲೆಗೆ ಶಿಕ್ಷಕರ ನಿಯೋಜಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ


ತಾಳಿಕೋಟೆ: ತಾಲೂಕಿನ ಭಂಟನೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಅಭಾವ ಇದ್ದು ಕೂಡಲೇ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ತರಗತಿಯನ್ನು ಬಹಿಸ್ಕರಿಸಿ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. 

ಭಂಟನೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 7 ಶಿಕ್ಷಕರು ಇದ್ದರು. ಇದರಿಂದ ಇಲ್ಲಿ ಉತ್ತಮ ಶಿಕ್ಷಣವೂ ಸಹಿತ ಸಿಗುತ್ತಿತ್ತು. ಆದರೆ ಕಳೆದ ವರ್ಗಾವಣೆಯಲ್ಲಿ 6 ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಇದರಿಂದ ಶಿಕ್ಷಕರ ಹುದ್ದೆಗಳ ಖಾಲಿ ಇವೆ. ಒಬ್ಬರು ಖಾಯಂ ಶಿಕ್ಷಕರು ಹಾಗೂ ಒಬ್ಬ ಅತಿಥಿ ಶಿಕ್ಷಕರಿದ್ದಾರೆ. 1 ರಿಂದ 8ನೇ ತರಗತಿಗಳು ಇವೆ. 230 ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಇಲ್ಲ ಎನ್ನುವ ಆರೋಪಗಳಿಗೆ ಅಪವಾದ ಎನ್ನುವಂತೆ ನಮ್ಮ ಶಾಲೆಯಲ್ಲಿ ಕನಿಷ್ಠ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಇರುತ್ತಾರೆ. ಇಂತಹ ಶಾಲೆಗೆ ಎಲ್ಲ ಶಿಕ್ಷಕರರನ್ನು ಸಂವಿಧಾನಿಕ ವರ್ಗಾವಣೆ ಮಾಡಲಾಗಿದೆ. ಇದರಿಂದ ನಮ್ಮ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. 10 ದಿನದೊಳಗಾಗಿ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಇಲ್ಲದಿದ್ದರೆ ಮತ್ತೆ ಉಗ್ರವಾದ ಹೋರಾಟವನ್ನು ಮಾಡಲಾಗುವದು ಎಂದು ಎಚ್ಚರಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳ ಗೈರಿನಲ್ಲಿ ಪಿಡಿಓ ಎಸ್‌.ಆಯ್‌.ದಳವಾಯಿ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವದು ಎಂದು ಮಾಹಿತಿಯ್ನು ನೀಡಿದರು. 

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಾಂತಗೌಡ ನಾವದಾಗಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ, ಮಲ್ಲನಗೌಡ ಆನೆಸೂರ, ಹಣಮಂತರಾಯ ತಳಹಳ್ಳಿ, ಸಾಯಬಣ್ಣ ತಳಹಳ್ಳಿ, ಕಿರಣ ಛಲವಾದಿ, ವಿದ್ಯಾರ್ಥಿಗಳಾದ ಜ್ಯೋತಿ, ಮಂಜುಳಾ, ಭಾಗ್ಯಶ್ರೀ, ಚಂದ್ರಕಲಾ, ದೇವಮ್ಮ, ಮಾಯಾದೇವಿ, ಶಾಲಿನಿ, ಮಂಜುಳಾ, ಮುತ್ತುರಾಜ, ಸಾಗರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ