ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ: ಉದೋಷಿ
ಮಾಂಜರಿ 19: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಪ್ರಸಕ್ತ ದಿನಮಾನದ ಸ್ಪರ್ಧಾತ್ಪಕ ಯುಗದಲ್ಲಿ ಅವಶ್ಯವಿರುವ ಎಲ್ಲ ಬಗೆಯ ಕೌಶಲಗಳನ್ನು ಅವರು ಅತ್ಯಂತ ಸುಲಭವಾಗಿ ಮೈಗೂಡಿಸಿಕೊಳ್ಳಬಹುದು ಎಂದು ಕನ್ನಡ ಸಾಹಿತಿ ಹಾಗೂ ಶಿಕ್ಷಕ ಅಜಯ್ ಉದೋಷಿ ಹೇಳಿದರು.
ಅವರು ಇಂದು ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಪಠ್ಯವು ಜ್ಞಾನ ವೃದ್ಧಿಗೆ ಸಹಕರಿಸಿದರೆ, ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸು ಮತ್ತು ದೇಹದ ಆರೋಗ್ಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸ್ಪರ್ಧಾತ್ಪಕ ಗುಣಗಳು ಪಠ್ಯೇತರ ಚಟುವಟಿಕೆಯಿಂದ ಪ್ರಾಪ್ತಿಯಾಗುವವು. ಹಾಗಾಗೀ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ತಮ್ಮ ಆಸಕ್ತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಬಸವರಾಜ್ ಕೋರೆ ಮಾತನಾಡಿ ಕೆಲವರು ಸೋಲು ಮತ್ತು ಕೀಳರಿಮೆ ಭಯದಿಂದ ಸ್ಪರ್ಧಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಿಂದೆ ಸರಿಯುತ್ತಾರೆ. ಈ ಬಗೆಯ ಕೀಳರಿಮೆ ಮತ್ತು ಭಯವನ್ನು ಮೊದಲು ಮೆಟ್ಟಿ ನಿಲ್ಲಬೇಕು. ಯಾವುದಾದರೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯ ಸೂಕ್ತ ತರಬೇತಿ ಪಡೆದರೆ, ಮತ್ತು ಪೂರ್ವ ತಯಾರಿ ನಡೆಸಿದರೆ, ಆ ವಿದ್ಯಾರ್ಥಿ ಪಠ್ಯೇತರ ಚಟುವಟಿಕೆಯಲ್ಲಿ ಕೂಡಾ ಉತ್ತಮ ಸಾಧನೆ ತೋರಬಹುದು ಎಂದು ಸಲಹೆ ನೀಡಿದರು.
ಕುಮಾರ್ ಕೋರೆ, ತುಕಾರಾಮ್ ಪಾಟೀಲ್, ವಿಶ್ವನಾಥ ನಷ್ಟೆ, ಅಣ್ಣಸಾಹೇಬ್ ಜಕಾತಿ, ರತ್ನಾಕರ್ ಚಕಲಿ, ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯ ಬಿ ಎಸ್ ಅಂಬಿ, ಪ್ರಾಚಾರ್ಯ ಆರ್ ಸಿ ಪಾಟೀಲ್, ಎ ಕೆ ಪಾಟೀಲ್, ಜೆ ಎಸ್ ತಮ್ಗೌಡ ಹಾಗೂ ಶಿಕ್ಷಕರು ಹಾಜರಿದ್ದರು.
ಎಸ್ ಜಿ ಹಿರೇಮಠ ಸ್ವಾಗತಿಸಿ. ಕುಮಾರ್ ಕೋಳಿ ವಂದಿಸಿ. ಎಸ್ ಬಿ ಜಕಾತಿ ನಿರೂಪಿಸಿದರು.