ಗೋಕಾಕ್

ವಿದ್ಯಾರ್ಥಿನಿಯರೇ ಜಾಗೃತರಾಗಿ-ಶೈಲಾ ಹತ್ತರಕಿ

ವಿದ್ಯಾರ್ಥಿನಿಯರೇ ಜಾಗೃತರಾಗಿ-ಶೈಲಾ ಹತ್ತರಕಿ

ಗೋಕಾಕ 26: ತಾಲೂಕಿನ ಮಮದಾಪೂರದ ಕಸ್ತೂರಬಾ ಬಾಲಕಿಯರ ವಸತಿ ನಿಲಯದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ’ಜ್ಞಾನಾಕ್ಷಯ’ ಚಿಂತಕರ ಚಾವಡಿಯ 36 ನೇ ಮಾಲಿಕೆ ಕಾರ್ಯಕ್ರಮ ಜರುಗಿತು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಕಾಕ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರ ಸಹಾಯಕರಾದ ಶೈಲಾ ಹತ್ತರಕಿ ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಸಾಫ್ಟ್‌ ವೇರನಿಂದ ಹಿಡಿದು ಚಂದ್ರಯಾನದವರೆಗೂ ತನ್ನ ಯಶಸ್ವಿ ಸಾಧಿಸಿದ್ದು ಆಗಿದೆ. ಆಧುನಿಕತೆಗೊಂಡಂತೆ ಮಹಿಳೆಯರು ಇನ್ನಷ್ಟು ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ಆತ್ಮವಿಶ್ವಾಸ, ಆತ್ಮಗೌರವಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ಹಕ್ಕುಗಳು, ಅವಕಾಶಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ ಹೊಂದುವಂತೆ ಹೆಣ್ಣು ಮಕ್ಕಳಿಗೆ ಕರೆ ನೀಡಿದರು.  

ಉಪಸ್ಥಿತರಿದ್ದ ಪ್ರೋ. ಹಣಮಂತ ಹತ್ತರಕಿ ವ್ಯಕ್ತಿತ್ವ ವಿಕಾಸದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಕಾನೂನಿನ ಬಗ್ಗೆ ತಿಳಿವಳಿಕೆ ಹಾಗೂ ಜಾಗೃತಿ ಹೊಂದುವಂತೆ ಸನ್ನದ್ಧರಾಗುವಂತೆ ಕೋರಿ ಉತ್ತಮ ಬದುಕನ್ನು ರೂಪಿಸಿಕೊಳ್ಳುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದರು. ಉಪಸ್ಥಿತರಿದ್ದ ಶಿಕ್ಷಕಿ ವಿದ್ಯಾಶ್ರೀ ಹಡಗಿನಾಳ ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪನ್ಮೂಲದಿಂದ ವಂಚಿತರಾಗದೇ ದೊರೆಯುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿಕೊಂಡ ವಸತಿ ನಿಲಯದ ನಿಲಯ ಪಾಲಕ ಸರಸ್ವತಿ ಕೌಜಲಗಿಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ಅತಿಥಿಗಳು ಹೇಳಿದಂತೆ ಹೆಣ್ಣು ಮಕ್ಕಳು ಕೀಳು ಮನೋಭಾವನೆಯಿಂದ ಹೊರಬಂದು ಪೋಷಣೆ, ಆರೋಗ್ಯ, ಶಿಕ್ಷಣದಲ್ಲಿ ನಿರ್ಲಕ್ಷ್ಯ ತೋರಿಸದೇ ಗುಣಮಟ್ಟದ ಜೀವನವನ್ನು ಇನ್ನಷ್ಟು ಉನ್ನತಿಗೊಳಿಸಿಕೊಳ್ಳುವಂತೆ ಕೇಳಿಕೊಂಡರು.ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿಯ ಸಂಚಾಲಕ ರ. ವೀ ದೇಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಗೌರವ ಸಮರ​‍್ಿಸಿ ವಂದಿಸಿದರು. ಆರಂಭದಲ್ಲಿ ರೂಪಾ ಹುಲಗನ್ನವರ ಮತ್ತು ತಾಯಮ್ಮ ಕುರಿ ವಿಜ್ಞಾನ ಗೀತೆಯನ್ನು ಹಾಡಿದರು. ಪ್ರಿಯಾ ದೇಸಾಯಿ ಸರ್ವರನ್ನು ಸ್ವಾಗತಿಸಿಕೊಂಡರು. ಪ್ರೀತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಭಾಗ್ಯಾ ಕಂಬಾರ ಕೂಡಲಸಂಗಮ ದೇವರ ವಚನವನ್ನು ವಾಚಿಸಿದರು. 


ಸುದ್ದಿ ಓದಿ