ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿ, ನಿಮ್ಮ ಸಾಧನೆ ನಮ್ಮ ಸಾಧನೆ: ಮೇಜರ ತುಗಶೆಟ್ಟಿ
ಕಾಗವಾಡ 14: ವಿದ್ಯಾರ್ಥಿಗಳೇ ನೀವು ಉತ್ತಮ ಸಾಧನೆ ಮಾಡಿ, ನಿಮ್ಮ ಸಾಧನೆಯೇ ನಮ್ಮ ಸಾಧನೆಯಾಗಿದೆ ಎಂದು ಶಿವಾನಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇಜರ್ ವ್ಹಿ.ಎಸ್. ತುಗಶೆಟ್ಟಿ ಹೇಳಿದ್ದಾರೆ.
ಅವರು ಬುಧವಾರ ದಿ. 13 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ನಿಮ್ಮ ತಂದೆ ತಾಯಿಗಳ ಆಸೆ- ಅಕಾಂಕ್ಷೆಗಳನ್ನು ಈಡೇರಿಸಿ, ಜೊತೆಗೆ ಮಹಾವಿದ್ಯಾಲಯದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿನಯತೆ ಇರಬೇಕು. ವಿದ್ಯಾರ್ಜನೆ ಮಾಡುವಾಗ ಬ್ರಹ್ಮಚರ್ಯ ಪಾಲಿಸಿದರೇ ನೀವು ಆಗಾಧವಾದ ಸಾಧನೆ ಮಾಡಬಹುದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಇತರರಿಗಿಂತ ಭಿನ್ನವಾಗಿರಬೇಕು. ಶಿಕ್ಷಣವೆಂದರೆ ಕೇವಲ ಪದವಿ ಪಡೆದುಕೊಳ್ಳುವುದಲ್ಲಾ. ಸತ್ಯವಂತರನ್ನು ನಿರ್ಮಾಣ ಮಾಡುವುದಾಗಿದೆ. ವಿದ್ಯಾರ್ಥಿಗಳು ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ಮಹಾವಿದ್ಯಾಲಯದಲ್ಲಿ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಶಿಕ್ಷಣ ನೀಡುವ ಪ್ರಾಧ್ಯಾಪಕರಿದ್ದಾರೆ ಅವರ ಸದುಪಯೋಗ ಪಡೆದುಕೊಳ್ಳಿ ಎಂದರು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ವಹಿಸಿ, ಮಾತನಾಡಿದರು.
ಅಕ್ಷತಾ ನಾಯಕ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಪ್ರೊ. ಎ.ಎ. ಪಾಟೀಲ ಸ್ವಾಗತಿಸಿದರು. ಕಲಾ ವಿಭಾಗದ ಸಂಯೋಜಕ ಡಾ. ಆರ್.ಎಸ್. ಕಲ್ಲೋಳಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಡಿ. ಧಾಮಣ್ಣವರಗುರಿ ಉದ್ದೇಶಗಳನ್ನು ವಿವರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಆರ್.ಎಸ್. ನಾಗರಡ್ಡಿ ಮಹಾವಿದ್ಯಾಲಯದ ನಿಯಮಗಳನ್ನು ತಿಳಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಜೆ.ಕೆ. ಪಾಟೀಲ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ಎ.ಎಂ. ಜಕ್ಕಣ್ಣವರ ಹಾಗೂ ಡಾ. ಎ.ಟಿ. ಪಾಟೀಲ ಮಹಾವಿದ್ಯಾಲಯದ ಪರಿಚಯ ಮಾಡಿದರು. ರೋಹನ ಪಡನಾಡ ನಿರೂಪಿಸಿದರು. ಡಾ. ಚಂದ್ರಶೇಖರ ವೈ. ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಕಲಾ ವಿಭಾಗದ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.