ವಿದ್ಯಾರ್ಥಿನಿಯ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ
ಶಿಗ್ಗಾವಿ 08: ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ವಿದ್ಯಾರ್ಥಿನಿಯ ಸಾವು ಸಂಭವಿಸಿ 15 ದಿನಗಳಾದರೂ ಇನ್ನೂ ಸಾವಿನ ಕುರಿತು ಸತ್ಯಾಂಶವನ್ನು ಪೊಲೀಸರು ಬಹಿರಂಗ ಗೊಳಿಸಿಲ್ಲ. ಕೂಡಲೇ ಪೊಲೀಸ್ ಇಲಾಖೆ ಸತ್ಯಾಂಶವನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಮೃತ ವಿದ್ಯಾರ್ಥಿನಿ ಮನೆಗೆ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿನಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಜಿಲ್ಲೆ ಮತ್ತು ತಾಲೂಕಿನ ವಿವಿಧ ಸಂಘಟನೆ ಪ್ರತಿಭಟನೆ ಮಾಡಿದ್ದರೂ ಇನ್ನೂವರೆಗೂ ಸತ್ಯಾಸತ್ಯತೆ ಬಯಲಾಗಿಲ್ಲ. ಹಾಗಾಗಿ ಪೊಲೀಸ ಇಲಾಖೆಯವರು ಪ್ರಕರಣ ಕುರಿತು ವಿಳಂಭ ಮಾಡುತ್ತಿರುವುದುಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿದೆ. ಪೊಲೀಸರು ಕೂಡಲೇ ತನಿಖೆ ಮಾಡಿ ಸತ್ಯವನ್ನು ಬಯಲಿಗೆಳೆಯಬೇಕು. ನೊಂದ ಕುಟಂಬಕ್ಕೆ ನ್ಯಾಯ ಒದಗಿಸಬೇಕು. ವಿದ್ಯಾರ್ಥಿನಿಯರು ನಿರ್ಭಯವಾಗಿ ಓಡಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ಇನ್ನೋಬ್ಬರಿಗೂ ಇಂತಹ ಅನ್ಯಾಯವಾಗಬಾರದು. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಶೀಘ್ರ ಪ್ರಕರಣ ಇತ್ಯರ್ಥಗೊಳಿಸದಿದ್ದಲ್ಲಿ ಸವಣೂರನಲ್ಲಿ ನಡೆಯುವ ಸಮಾಜದ ಅಭಿಯಾನದಲ್ಲಿ ಸಮಾಜದ ಮುಖಂಡರೊಂದಿಗೆ ಈ ಪ್ರಕರಣ ಕುರಿತು ಚರ್ಚಿಸಿ ಮುಂದಿನ ನಡೆಯನ್ನು ತಿಳಿಸಲಾಗುವುದು ಎಂದರು.
ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಪಂಚಮಸಾಲಿ ಸಮಾಜದತಾಲೂಕಾಧ್ಯಕ್ಷ ಶಿವಾನಂದ ಬಾಗೂರ, ಗ್ರಾ.ಪಂ ಸದಸ್ಯ ನಾಗರಾಜ ಸೂರಗೊಂಡ, ಬಸಲಿಂಗಪ್ಪ ನರಗುಂದ, ಮಂಜುನಾಥ ಮಣ್ಣಣ್ಣವರ ಮತ್ತಿತರರು ಉಪಸ್ಥಿತರಿದ್ದರು.