ಬೈಲಹೊಂಗಲ

ತಹಶೀಲ್ದಾರ ನಡೆಗೆ ಕನ್ನಡಪರ ಸಂಘಟನೆಗಳ ತೀವ್ರ ವಿರೋಧ: ರಾಜ್ಯೋತ್ಸವ ಸಭೆ ಬಹಿಷ್ಕರಿಸಿ ಪ್ರತಿಭಟನೆ

ತಹಶೀಲ್ದಾರ ನಡೆಗೆ ಕನ್ನಡಪರ ಸಂಘಟನೆಗಳ ತೀವ್ರ ವಿರೋಧ: ರಾಜ್ಯೋತ್ಸವ ಸಭೆ ಬಹಿಷ್ಕರಿಸಿ ಪ್ರತಿಭಟನೆ

ಬೈಲಹೊಂಗಲ 26: ಪಟ್ಟಣದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಭೆ ಬಹಿಷ್ಕರಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.   

ನಿಗದಿತ ಸಮಯಕ್ಕೆ ಸಭೆಗೆ ಆಗಮಿಸದ ತಹಶೀಲ್ದಾರ ಸಚ್ಚಿದಾನಂದ ಕೊಚನೂರ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ಸಭೆಗೆ ಬಂದು ಹಾಜರಾಗದ ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಡೆಯನ್ನು ಖಂಡಿಸಿದರು. ದಿಢೀರನೇ ಸಭೆ ಬಹಿಷ್ಕರಿಸಿ ಹೊರ ಬಂದು ಪ್ರತಿಭಟನೆಗಿಳಿದರು.   

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ ಪ್ರತಿಭಟನಾನಿರತ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ಕಂಡು ಕಾಣದಂತೆ ನಿರ್ಲಕ್ಷಿಸಿದರು. ಇದಕ್ಕೆ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಕನ್ನಡ ವಿರೋಧಿ ತಹಶೀಲ್ದಾರಗೆ ದಿಕ್ಕಾರ ಎಂದು ಘೋಷಣೆ ಕೂಗಿದರು. ಕನ್ನಡಪರ ಸಂಘಟನೆಗಳ ಮುಖಂಡರು, ಕೆಲ ಅಧಿಕಾರಿಗಳ ನಡುವೆ ತಹಶೀಲ್ದಾರ ಕನ್ನಡ ರಾಜ್ಯೋತ್ಸವ ಸಭೆಯ ಬಗ್ಗೆ ನಿರ್ಲಕ್ಷ ವಹಿಸಿದ್ದರ ಕುರಿತು ಕೆಲಕಾಲ ಚರ್ಚೆ ನಡೆಯಿತು. ಕೆಲ ಅಧಿಕಾರಿಗಳು, ಸಿಬ್ಬಂದಿ ಪ್ರತಿಭಟನಾನಿರತರ ಮನ ಒಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ.   

ಈ ಕುರಿತು ತಹಶೀಲ್ದಾರ ಸಚ್ಚಿದಾನಂದ ಕುಚನೂರ ಅವರನ್ನು ಸಂಪರ್ಕಿಸಿದಾಗ ಕಳೆದ ಮೂರು ದಿನಗಳಿಂದ ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ತೊಡಗಿಸಿಕೊಂಡಿದ್ದೆ. ತಹಶೀಲ್ದಾರ ಕಚೇರಿಯಲ್ಲಿ ನ್ಯಾಯಾಲಯ ಕಲಾಪ ಇದ್ದಿದ್ದರಿಂದ ಸಭೆಗೆ ತಡವಾಗಿ ಬಂದೆ. ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಯಾವುದೇ ತಪ್ಪು ಭಾವನೆ ತಿಳಿಯಬಾರದು ಎಂದು ಮನವಿ ಮಾಡಿದರು.   

ಕರ್ನಾಟಕ ನವ ನಿರ್ಮಾಣ ಪಡೆ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಕರವೇ ಪ್ರವೀಣಶೆಟ್ಟಿ ಬಣ ಅಧ್ಯಕ್ಷ ಶಿವಾನಂದ ಇಂಚಲ ಮಾತನಾಡಿ, ‘ಕನ್ನಡ ವಿರೋಧಿ ತಹಶೀಲ್ದಾರ ನಡೆಗೆ ಬೇಸರವಾಗಿದೆ. ತಹಶೀಲ್ದಾರ ನಡೆ ಖಂಡಿಸಿ ರಾಜ್ಯೋತ್ಸವ ಮುಗಿದ ಮೇಲೆ ತಹಶೀಲ್ಧಾರ ವರ್ಗಾವಣೆ ಆಗುವವರೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.   

ಕರವೇ ತಾಲ್ಲೂಕು ಘಟಕ ಅಧ್ಯಕ್ಷ ರಾಜು ಬೋಳನ್ನವರ, ದಲಿತ ಸಂಘಟನೆ ಮುಖಂಡ ಪ್ರಭಾಕರ ಭಜಂತ್ರಿ, ಸಿದ್ದಾರೂಢ ಹೊಂಡಪ್ಪನವರ, ಮಲ್ಲಿಕಾರ್ಜುನ ಬಾಜಿ, ರವಿ ತುರಮರಿ, ರಾಜು ಬೆಳಗಾವಿ, ಶಶಿಕುಮಾರ ಪಾಟೀಒ, ಅಕ್ಷಯ ಕಡಕೋಳ, ಸೋಯಬ್ ಸಂಗೊಳ್ಳಿ, ಪಿಂಟು ಕುದರಿ, ಅನೇಕರು ಇದ್ದರು 


ಸುದ್ದಿ ಓದಿ