ನಾಳೆಯ ಕನ್ನಡಕ್ಕಾಗಿ ತಂತ್ರಾಂಶ ಬಳಕೆಗೆ ಆದ್ಯತೆ
ಟಿ.ಎಸ್. ನಾಗಾಭರಣ ಹೇಳಿಕೆ: ರಾಜ್ಯ ಮಟ್ಟದ ವಿಚಾರ ಸಂಕಿರಣ
ಕಲಬುರಗಿ 19: ಕರ್ನಾಟಕ ಸಾರಸ್ವತ ಲೋಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ `ಆದ್ಯರು’ ಎಂದರೆ ಕವಿರಾಜಮಾರ್ಗ ಪರಿಸರದ ಕಲ್ಯಾಣದ ನೆಲ. ಕನ್ನಡಕ್ಕೆ ಕಿರೀಟಪ್ರಾಯದಂತೆ. ಅತ್ಯಂತ ಶ್ರೀಮಂತವಾಗಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಅರ್ಥಮಾಡಿಕೊಂಡು `ಭವಿಷ್ಯ’ದ ಕನ್ನಡ ಕಟ್ಟಬೇಕಾಗಿದೆ. ತಂತ್ರಾಂಶ ಬಳಸಿಕೊಂಡು ಮುನ್ನಡೆದಾಗ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯ ಎಂದು ಸಿನಿಮಾ ಕ್ಷೇತ್ರದ ನಿರ್ದೇಶಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ಸೋಮವಾರ ನಡೆದ `ಕವಿರಾಜಮಾರ್ಗ ಪರಿಸರದ ಭಾಷೆ ಮತ್ತು ಸಂಸ್ಕೃತಿ’ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಹೀಗೆ ಹರಿದು ಹಂಚಿಹೋಗಿರುವ ಮನಸ್ಥಿತಿಯನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಒಂದು ಪ್ರದೇಶದ ಅಭಿವೃದ್ಧಿಯನ್ನು ಕೇವಲ ರಸ್ತೆ ಮತ್ತು ಕಟ್ಟಡಗಳಿಂದ ಅಳೆಯಲು ಬರುವುದಿಲ್ಲ. ಅದು ನಮ್ಮ ಕನ್ನಡ ಸಂಸ್ಕೃತಿ, ಪರಂಪರೆಯಿಂದ ಮಾತ್ರ ಸಾಧ್ಯ ಎಂದ ಅವರು, ರಾಷ್ಟ್ರಕೂಟರ ಕಾಲದ ಕವಿರಾಜಮಾರ್ಗಕಾರ ಇಡೀ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಗೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ ಇತರ ಭಾಗದವರಿಗೆ ಹೆದ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿವಿ ಕುಲಪತಿ ಪ್ರೊ. ಚಂದ್ರಕಾಂತ ಎಂ. ಯಾತನೂರ ಮಾತನಾಡಿ, ಈ ಭಾಗಕ್ಕೆ ದೊರೆಯಬೇಕಾಗಿದ್ದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರದ ಅವಕಾಶಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಧಾರವಾಡ ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ, ಕನ್ನಡ ಭಾಷೆ, ಕನ್ನಡ ಕವಿಗಳಿಗೆ ರಾಜಮಾರ್ಗವಾಗಿರುವ ಕವಿರಾಜಮಾರ್ಗ ಕೃತಿ ಕನ್ನಡದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿದೆ. ಕಾವ್ಯ, ನಾಡು, ನಾಡವರ್ಗಳ್ ಬಗ್ಗೆ ಮಾತನಾಡಿದ ಒಂದು ವಿಶೇಷ ಕೃತಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಲಾನಿಕಾಯದ ಡೀನರಾದ ಪ್ರೊ. ಎಚ್.ಟಿ. ಪೋತೆ, ಸಾಂಸ್ಕೃತಿಕ, ಸಾಹಿತ್ಯಕ ಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ ಇಡೀ ಅಖಂಡ ಕರ್ನಾಟಕಕ್ಕೆ ಬಹಳ ಮಹತ್ವದ ಕೊಡುಗೆ ನೀಡಿದೆ. ಆದರೆ ಅವಕಾಶಗಳಿಂದ ಈ ನೆಲ ವಂಚಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮಣ ರಾಜನಾಳಕರ ಅತಿಥಿಯಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಡಾ. ಹನುಮಂತ ಮೇಲ್ಕೇರಿ ನಿರೂಪಿಸಿದರು. ಹರಿಪ್ರಿಯಾ ವಚನ ಪ್ರಾರ್ಥನೆ ನೆರವೇರಿಸಿದರು. ಅತಿಥಿ ಉಪನ್ಯಾಸಕಿ ಡಾ. ಶೈಲಜಾ ಬಾಗೇವಾಡಿ ವಂದಿಸಿದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ರಾಜೇಂದ್ರ ಯರನಾಳೆ, ತೋಟಗಾರಿಕೆ ಇಲಾಖೆಯ ವಿಶ್ರಾಂತ ಅಧಿಕಾರಿ ಬಸವಲಿಂಗಪ್ಪ ಅಲ್ಹಾಳ, ಡಾ. ಸೂರ್ಯಕಾಂತ ಸುಜ್ಯಾತ್, ಪ್ರೊ. ಈಶ್ವರ ಇಂಗನ್, ಡಾ. ಬಿ.ಎಂ. ಕನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೈಚಾಚುವ ಸ್ಥಿತಿ : ಪ್ರೊ. ಎಚ್.ಟಿ. ಪೋತೆ
ಕವಿರಾಜಮಾರ್ಗ, ವಡ್ಡಾರಾಧನೆದಂತಹ ಮಹತ್ವದ ಗ್ರಂಥಗಳನ್ನು ಕೊಟ್ಟ ನೆಲವಾದ ಕಲ್ಯಾಣದಲ್ಲಿ, ವಚನ, ದಾಸ, ತತ್ವಪದ, ಸೂಫಿ ಇವೆಲ್ಲ ಇದ್ದೂ, ಕಲ್ಯಾಣ ಕರ್ನಾಟಕವನ್ನು ಹೊರತುಪಡಿಸಿ, ಕರ್ನಾಟಕದಲ್ಲಿ ಎರಡನೇ ದರ್ಜೆ ಪ್ರಜೆಗಳಾಗುತ್ತಿದ್ದೇವೆ ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ, ಅವಕಾಶಕ್ಕಾಗಿ ಕೈಚಾಚುವಂತ ಸ್ಥಿತಿ ಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ನಾಗಾಭರಣ ಅವರ ಗಮನ ಸೆಳೆದರು.