ಹೂವಿನ ಹಡಗಲಿ

ಮೈಲಾರ ಜಾತ್ರೆಗೆ ವಿದ್ಯುಕ್ತ ಚಾಲನೆ : ಭಕ್ತರಿಗೆ ನಿರ್ಬಂಧ

ಮೈಲಾರ ಜಾತ್ರೆಗೆ ವಿದ್ಯುಕ್ತ ಚಾಲನೆ : ಭಕ್ತರಿಗೆ ನಿರ್ಬಂಧ

ಹೂವಿನಹಡಗಲಿ 08: ನಾಡಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗ ಸ್ವಾಮಿಯ ವಾರ್ಷಿಕ ಸರಳ ಜಾತ್ರೆಗೆ ಧಾರ್ಮಿಕ ಆಚರಣೆಗಾಗಿ ಮಂಗಳವಾರ ವಿದ್ಯುಕ್ತ ಚಾಲನೆ ನೀಡಲಾಯಿತು. ರಥಸಪ್ತಮಿ ನಿಮಿತ್ತ ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಕಂಕಣ ಧಾರಣೆಯೊಂದಿಗೆ ಚಾಲನೆ ನೀಡಲಾಯಿತು. 

 ದೇವಸ್ಥಾನ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರಲಿಂಗ ಸ್ವಾಮಿ, ಕಾರ್ಣೀಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು ನಂತರ ದೇವಸ್ಥಾನ ಬಾಬ್ದಾರರು, ಕಂಚೀವೀರರು ಕಂಕಣ ಧಾರಣೆ ಮಾಡಿದರು.  ಹಾಗೂ ಭಕ್ತಾಧಿಗಳು ಸಾಂಪ್ರದಾಯಿಕವಾಗಿ ಹಾಲು ಉಕ್ಕಿಸುವ ಮೂಲಕ ಜಾತ್ರೆ ಚಾಲನೆ ಪಡೆದುಕೊಂಡಿತು. ಸುಕ್ಷೇತ್ರದ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸ, ಕಾರಣಿಕ ನುಡಿಯುವ ಗೊರವಯ್ಯನಿಗೆ ಹಸ್ತಾಂತರಿಸಲಾಯಿತು.  

ಕೋವಿಡ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಫೆ.8ರಿಂದ 19ರವರೆಗೆ ಸುಕ್ಷೇತ್ರದಲ್ಲಿ ನಡೆಯುವ ಜಾತ್ರಾ ಕಾರ‌್ಯಕ್ರಮಗಳಲ್ಲಿ ಹೊರಗಿನ ಭಕ್ತರು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ವಿಜಯನಗರ ಜಿಲ್ಲಾಧಿಕಾರಿ ನಿಬಂಧಿಸಿದೆ. ಮೈಲಾರ ಸುಕ್ಷೇತ್ರದ ಎಲ್ಲ ಮಾರ್ಗಗಳನ್ನು ಬಂದ್ ಮಾಡಲು ಪೊಲೀಸ್ ಕ್ರಮಕೈಗೊಳ್ಳಲಾಗಿದೆ.ಕೋವಿಡ್ ಮಾರ್ಗಸೂಚಿಗೆ ಒಳಪಟ್ಟು ಸುಕ್ಷೇತ್ರದ ಧಾರ್ಮಿಕ ಪರಂಪರೆಯಂತೆ ಎಲ್ಲ ಆಚರಣೆಗಳನ್ನು ಸರಳವಾಗಿ ನೆರವೇರಿಸುತ್ತೇವೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್‌.ಪ್ರಕಾಶ್ ರಾವ್ ತಿಳಿಸಿದ್ದಾರೆ. 

ರಾಕ್ಷಸರಾದ ಮಣಿಕಾಸುರ ಮತ್ತು ಮಲ್ಲಾಸುರನ ಮರ್ದನಕ್ಕಾಗಿ ಮೈಲಾರಲಿಂಗಸ್ವಾಮಿ  ಯುದ್ದಕ್ಕೆ ಹೋಗುವ ಕುರುವಿಗಾಗಿ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ಗುಪ್ತ ಮೌನ ಸವಾರಿ ಡೆಂಕನ ಮರಡಿಗೆ ಸಾಗಿತು. ನಂತರ ಮೈಲಾರಲಿಂಗಸ್ವಾಮಿಯ ಆರಾಧಕರಾದ ಗೊರವಪ್ಪರು ಭಕ್ತರು ತಂದಿದ್ದ ಕಡುಬುಗಳನ್ನು ಪರಸ್ಪರ ಹೊಡೆದುಕೊಳ್ಳುವ ಮೂಲಕ ರಾಕ್ಷಸರನ್ನು ಸಂಹರಿಸಿದ ಪೌರಾಣಿಕ ಹಿನ್ನೆಲೆಯ ಕಡುಬಿನ ಕಾಳಗ ನಡೆಯಿತು.  

ಶ್ರೀ ಸ್ವಾಮಿಯ ಮೌನ ಸವಾರಿ ಡೆಂಕನ ಮರಡಿಗೆ ಸಾಗಿರುವುದರಿಂದ 11 ದಿನಗಳವರೆಗೆ ದೇವಸ್ಥಾನದಲ್ಲಿ ಜಾಗಟೆ, ಘಂಟಾನಾದ ಮೊಳಗುವುದಿಲ್ಲ, ಮಂಗಳಾರತಿ ಬೆಳಗುವಂತ್ಲಿಲ. ದೇವಸ್ಥಾನ ಅರ್ಚಕರು ದಿನಕ್ಕೆರಡು ಬಾರಿಯಂತೆ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವ ಡೆಂಕನಮರಡಿಗೆ ತೆರಳಿ ಪೂಜಾ ನೆರವೇರಿಸುತ್ತಾರೆ. 


ಸುದ್ದಿ ಓದಿ