ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಕೋವಿಡ್ ರೀಲೀಫ್ ಟಾಸ್ಕ್‌ಫೋರ್ಸ್ ಪ್ರಾರಂಭ
ಹೊನ್ನಾವರ 30: ರಾಜ್ಯಾದ್ಯಂತ ಕೋವಿಡ್ ಎರಡನೆಯ ಅಲೆಯು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಘಟಕವು ತನ್ನ ಅಂಗಸಂಸ್ಥೆಗಳಾದ ಹುಮ್ಯಾನಿಟೇರಿಯನ್ ರೀಲೀಫ್ ಸೊಸೈಟಿ (ಹೆಚ್.ಆರ್.ಎಸ್.), ಎಸ್.ಐ.ಓ., ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಡಾಕ್ಟರ್ಸ್ ಫಾರ್ ಹುಮ್ಯಾನಿಟಿ ಹಾಗೂ ಫಾರ್ವರ್ಡ್ ಟ್ರಸ್ಟ್- ಇವುಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಕೋವಿಡ್ ರೀಲೀಫ್ ಟಾಸ್ಕ್‌ಫೋರ್ಸ್ ಪ್ರಾರಂಭಿಸಿದೆ. ಈ ಟಾಸ್ಕ್‌ಫೋರ್ಸ್‌ನಲ್ಲಿ ರಾಜ್ಯದ ವಿವಿಧ ಭಾಗಗಳ ಸುಮಾರು 1500 ಕ್ಕಿಂತಲೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಸ್ಕ್‌ಫೋರ್ಸ್‌ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಫೋರ್ಸ್, ರೀಲೀಫ್ ವರ್ಕ್ ಫೋರ್ಸ್ ಹಾಗೂ ವಾರ್‌ರೂಮ್ ವರ್ಕ್‌ಫೋರ್ಸ್‌ಗಳೆಂಬ 3 ವಿಭಾಗಗಳಿದ್ದು, ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೆಡಿಕಲ್ ಎಮರ್ಜೆನ್ಸಿ ತಂಡವು ಕೋವಿಡ್ ಸೆಂಟರ್ ನಿರ್ವಹಣೆ, ಆಕ್ಸಿಜನ್ ಪೂರೈಕೆ, ಆಂಬುಲೆನ್ಸ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ.
ರೀಲೀಫ್ ವರ್ಕ್‌ಫೋರ್ಸ್ ತಂಡವು ಕೋವಿಡ್ ವ್ಯಾಕ್ಸಿನ್ ಪಡೆಯುವ ಬಗ್ಗೆ ಜಾಗೃತಿ, ಕಮ್ಯೂನಿಟಿ ಕಿಚನ್ ವ್ಯವಸ್ಥೆ, ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳ ಗೌರವಯುತ ಅಂತ್ಯ ಸಂಸ್ಕಾರ, ಇತ್ಯಾದಿ ಕೆಲಸಗಳನ್ನು ಹಾಗೂ ವಾರ್‌ರೂಮ್ ವರ್ಕ್‌ಫೋರ್ಸ್ ವಿಭಾಗವು ಅಧಿಕೃತ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಲಭ್ಯತೆಯ ಬಗ್ಗೆ, ಕೌನ್ಸಿಲಿಂಗ್ ಇತ್ಯಾದಿ ವಿವರಗಳನ್ನು ಸಂಬಂಧಪಟ್ಟವರಿಗೆ ನೀಡುತ್ತದೆ.
ಟಾಸ್ಕ್‌ಫೋರ್ಸ್‌ನ ಸ್ವಯಂಸೇವಕರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯ ಮೂಲಕ ಅನೇಕರಿಗೆ ಬೆಡ್ ಬುಕಿಂಗ್‌ನ ಮಾಹಿತಿ, ಆಕ್ಸಿಜನ್ ಪೂರೈಕೆಯ ಮಾಹಿತಿ, ಕೌನ್ಸಿಲಿಂಗ್ ಹಾಗೂ ಆಂಬುಲೆನ್ಸ್‌ಗಳ ಲಭ್ಯತೆಯ ಬಗ್ಗೆ ಕೋವಿಡ್ ಪೀಡಿತರಿಗೆ ಮಾಹಿತಿ ನೀಡುತ್ತಿದೆ. ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಈ ಸಹಾಯವಾಣಿಯು ಈಗಾಗಲೇ ಸಾವಿರಕ್ಕಿಂತಲೂ ಅಧಿಕ ಜನರಿಗೆ ಮಾಹಿತಿಯನ್ನು ನೀಡಿದೆ.
ಟಾಸ್‌ಫೋರ್ಸ್ ವತಿಯಿಂದ ಈಗಾಗಲೇ ಬೆಂಗಳೂರಿನಲ್ಲಿ 'ಕಮ್ಯೂನಿಟಿ ಕಿಚನ್'ನ್ನು ಪ್ರಾರಂಭಿಸಿ ಚಿತಾಗಾರ ಹಾಗೂ ಕಬರಸ್ತಾನಗಳ ಸಿಬ್ಬಂದಿಗಳಿಗೆ, ಆಂಬುಲೆನ್ಸ್ ಚಾಲಕರಿಗೆ ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ಅರ್ಹರಿಗೆ ಆಹಾರ ಮತ್ತು ನೀರನ್ನು ಪೂರೈಸುವ ವ್ಯವಸ್ಥೆ ಮಾಡುತ್ತಿದೆ.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಸಮಾಜ ಸೇವಾ ಘಟಕವು ಕಳೆದ ವರ್ಷ 10 ಲಕ್ಷಕ್ಕಿಂತಲೂ ಅಧಿಕ ರೇಷನ್ ಕಿಟ್‌ಗಳನ್ನು ಅರ್ಹರಿಗೆ ಪೂರೈಕೆ ಮಾಡಿದ್ದು, ವೈದ್ಯಕೀಯ ಸೇವೆ, ನಿರ್ಗತಿಕರಿಗೆ ಮನೆ ನಿರ್ಮಾಣ, ಸ್ಚಚ್ಛತಾ ಅಭಿಯಾನ, ರಕ್ತದಾನ ಇತ್ಯಾದಿ ಜನೋಪಯೋಗಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.