ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ: ನಾಯ್ಕ
ಕಾರವಾರ 15: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಮಕ್ಕಳು ಹೆಚ್ಚು ಹೆಚ್ಚು ಆಟಗಳನ್ನು ಆಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ ಎಂದು ಮೀನುಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ವಿ.ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ ಆಮದಳ್ಳಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ ಮತ್ತು ಲಯನ್ಸ್ ಕ್ಲಬ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿವಿವೇಕಾನಂದರ 158 ನೇ ಜಯಂತಿಯ ನಿಮಿತ್ತ ಆಚರಿಸಲಾಗುವ ‘ರಾಷ್ಟ್ರೀಯ ಯುವ ಸಪ್ತಾಹ’ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವಾಗಿ ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರದ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಫುರ್ಖಾನ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಶೌಕತ್ ಹುಸೇನ್ ಶೇಖ್ ಮಾತನಾಡಿ ಬಾಲ್ಯದಿಂದಲೇ ಮಕ್ಕಳು ಬೇರೆ ಬೇರೆ ಆಟಗಳನ್ನು ಆಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದರಿಂದ ಅವರು ದೈಹಿಕವಾಗಿ ಸಬಲರಾಗುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್ ಮಾತನಾಡಿ ಕೋವಿಡ್-19 ರ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದೇ ಇರುವುದರಿಂದ ಮಾನಸಿಕವಾಗಿ ಮಕ್ಕಳಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗಬಾರದೆಂಬ ಉದ್ದೇಶದಿಂದ ಮಕ್ಕಳು ಕ್ರೀಡೆಯಲ್ಲಿ ತೊಡಗಿ ದೈಹಿಕವಾಗಿ ಸದೃಢರಾಗಬೇಕೆಂಬ ಕಾರಣಕ್ಕಾಗಿ ಕ್ರೀಡಾ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಕ್ರಿಕೆಟ್ ಬ್ಯಾಟ್ ಸ್ಟ್ಯಾಂಪ್ ಮತ್ತು ಬಾಲ್ಗಳನ್ನು ನೀಡಲಾಯಿತು. ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಸ್ವಾಗತಿಸಿದರು. ಕ್ಲಬ್ನ ಅಧ್ಯಕ್ಷ ಮೊಹಮ್ಮದ್ ಅಸಿಫ್ ಶೇಖ್ ವಂದಿಸಿದರು.