ಪೊಲೀಸರ ಒತ್ತಡಕ್ಕೆ ಕ್ರೀಡೆ, ವ್ಯಾಯಾಮ ಪರಿಹಾರ; ಪ್ರತಿ ದಿನ ಹೊಸ ಚೈತನ್ಯ ನೀಡುತ್ತದೆ
ಧಾರವಾಡ .20: ಪೊಲೀಸರಿಗೆ ಪ್ರತಿದಿನವೂ ಒತ್ತಡಭರಿತ ಪರಿಸ್ಥಿತಿಗಳನ್ನು ನಿರ್ವಹಿಸುವುದು ಸಾಮಾನ್ಯ. ಇಂತಹ ಒತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಕ್ರೀಡೆ, ವ್ಯಾಯಾಮಗಳು ಸೇರಿವೆ. ಕ್ರೀಡೆಗಳು ಪ್ರತಿದಿನ ಮನಸ್ಸಿಗೆ ಹೊಸ ಚೈತನ್ಯ ಮತ್ತು ಸಂತಸವನ್ನು ನೀಡುತ್ತವೆ ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಹೇಳಿದರು.ಅವರು ಇಂದು (ನ.20) ಬೆಳಿಗ್ಗೆ, ಧಾರವಾಡ ಪೊಲೀಸ್ ಹೆಡ್ ಕ್ವಾರ್ಟರ್ಸನ ಡಿಎಆರ್ ಪರೇಡ್ ಮೈದಾನದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.
ಕ್ರೀಡೆ ಯಾವಾಗಲೂ ನಮಗೆ ಉತ್ಸಾಹ ಕೊಡುತ್ತದೆ. ಕ್ರೀಡಾ ಮನೋಭಾವದ ಸೋಲು ಗೆಲುವುಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ನಾವು ಎಷ್ಟು ಕೆಲಸ, ಕಾರ್ಯಗಳನ್ನು ಮಾಡುತ್ತೇವೆ. ಅದರಲ್ಲಿ ಪ್ರತಿಯೊಂದರಲ್ಲೂ ನಾವು ಗೆಲುವು ಕಾಣುವುದಿಲ್ಲ. ಕೆಲವು ಸಲ ಸೋಲನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೋಲನ್ನು ಗೆಲುವಿನಂತೆ ಸಮಾನ ಮನೋಭಾವದಿಂದ ನಾವು ಸ್ವೀಕರಿಸಬೇಕು ಎಂದು ಅವರು ಹೇಳಿದರು.ಪೊಲೀಸರು ದಿನದ ಬಹುತೇಕ ಸಮಯವನ್ನು ಇಲಾಖೆ ಕರ್ತವ್ಯ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಕಳೆಯುತ್ತಿರಿ. ಆದ್ದರಿಂದ ಈ ತರಹದ ಕ್ರೀಡೆಗಳು ನಿಮ್ಮ ಮನಸ್ಸಿಗೂ ವಿಶ್ರಾಂತಿ, ಹೊಸತನ ನೀಡುತ್ತವೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಭದ್ರಾ ತಂಡದ ನಾಯಕ ಆರ್.ಎಸ್.ಐ. ಗೀರೀಶ ಜುಂಜೂರಿ, ತುಂಗಾ ತಂಡದ ನಾಯಕಿ ನಿಸ್ತಂತು ವಿಭಾಗ ಮಹಿಳಾ ಪಿಎಸ್ಐ ನಿರ್ಮಲಾ ಜಂಬಗಿ, ಕೃಷ್ಣಾ ತಂಡದ ನಾಯಕ ಧಾರವಾಡ ಗ್ರಾಮೀಣ ಠಾಣೆ ಪಿ.ಎಸ್.ಐ. ಪ್ರವೀಣ ಕೋಟಿ, ವರದಾ ತಂಡದ ನಾಯಕ ಸಿ.ಇ.ಎನ್. ಠಾಣೆಯ ಪಿ.ಎಸ್.ಐ ಅಭಿಜೀತ್, ಕಾವೇರಿ ತಂಡದ ನಾಯಕಿ ಮಹಿಳಾ ಠಾಣೆ ಪಿಎಸ್ಐ ನೇತ್ರಾವತಿ ಪವಾರ, ಶಾಲ್ಮಲಾ ತಂಡದ ನಾಯಕ ನಿಸ್ತಂತು ಪಿ.ಎಸ್.ಐ ಉಮೇಶ ಕಮತಿ ಅವರು ತಮ್ಮ ತಂಡದ ಸದಸ್ಯರೊಂದಿಗೆ ಆಕರ್ಷಕ ಪಥ ಸಂಚಲನ ನಡೆಸಿ, ಅತಿಥಿಗಳಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಆರ್ಎಸ್ಐ. ಗಳಾದ ವಾಯ್.ಎಮ್.ದೊಡಮನಿ ಮತ್ತು ಎ.ಎಫ್. ಜಿಲ್ಲೇನವರ ಅವರು ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ಡಿ.ಎ.ಆರ್ ಡಿ.ಎಸ್.ಪಿ. ಡಿ.ಎಸ್.ಧನಗರ ಅವರು ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿಎಸ್ಪಿ ವಿನೋದ ಮುಕ್ತೇದಾರ ಹಾಗೂ ನಿವೃತ್ತ ಡಿಸಿಪಿ ದೇವರಹೊರು ಅವರು ಇದ್ದರು. ಈ ಸಂದರ್ಭದಲ್ಲಿ ಬೇರೆ ಬೇರೆ ಘಟಕಗಳ ಪೊಲೀಸ್ ಅಧಿಕಾರಿಗಳು, ಕ್ರೀಡಾಪಟುಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.