ಪೊಲೀಸ್ ಹುತಾತ್ಮರ ತ್ಯಾಗ, ಬಲಿದಾನ ಸದಾ ಸ್ಮರಣೀಯ: ಜಿಲ್ಲಾಧಿಕಾರಿ ಸ್ನೇಹಲ್. ಆರ್.
ಧಾರವಾಡ 21: ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರ ಕುಟುಂಬದವರನ್ನೂ ಗೌರವಿಸಬೇಕು. 1959ರ ಅಕ್ಟೋಬರ್ 21ರಂದು ಲಡಾಖ್‌ನಲ್ಲಿ ಚೀನಿ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 10 ಪೊಲೀಸ್ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್., ಅವರು ಹೇಳಿದರು.ಅವರು ಇಂದು (ಅ.21) ಸ್ಮಾರಕ ಆವರಣ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಕರ್ತವ್ಯ ನಿರ್ವಹಿಸುವಾಗ 368 ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಬ್ಬ, ಉತ್ಸವ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ನಿರಂತರವಾಗಿ ಶ್ರಮಿಸುತ್ತಾರೆ. ರೈತರ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯಿಂದ ಸುಮಾರು 100 ಕಿ.ಮೀ. ದೂರದವರೆಗೆ ರೈತರೊಂದಿಗೆ ತೆರಳಿ ಭದ್ರತೆ ಒದಗಿಸಿರುವುದು ಪೊಲೀಸರ ಕರ್ತವ್ಯನಿಷ್ಠೆಗೆ ಉದಾಹರಣೆಯಾಗಿದೆ.