‘ಸ್ಪರ್ಧಾ ಸಂಗಮ’ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ: ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು
ಲೋಕದರ್ಶನ ವರದಿ
ಬೆಳಗಾವಿ 28: ನಗರದ ಶಿವಬಸವ ನಗರದಲ್ಲಿರುವ ಎಸ್.ಎಸ್. ಎಜುಕೇಷನ್ ಟ್ರಸ್ಟ್ನ ಶ್ರೀ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜು ಹಾಗೂ ನಾಗನೂರು ಶ್ರೀ ಪ್ರಭುದೇವ ಸ್ವತಂತ್ರ ವಿಜ್ಞಾನ (ಇಂಟಿಗ್ರೇಟೆಡ್) ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸ್ಪರ್ಧಾ ಸಂಗಮ’ ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಈ ವೇಳೆ ದಿವ್ಯ ಸಾನ್ನಿಧ್ಯ ಪೂಜ್ಯಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಅವರ ಸೃಜನಶೀಲತೆ ಹಾಗೂ ಕಲಾತ್ಮಕ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ‘ಸ್ಪರ್ಧಾ ಸಂಗಮ’ ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತು ಎಂದು ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನ, ಬುದ್ಧಿವಂತಿಕೆ, ಕಲ್ಪನಾಶಕ್ತಿ ಮತ್ತು ಅಭಿನಯ ಕೌಶಲವನ್ನು ಪ್ರದರ್ಶಿಸಿ ಗಮನ ಸೆಳೆದಿರುವುದು ಸಂತಸವಾಗಿದೆ. ಇಂತಹ ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡದ ಮನೋಭಾವ, ನಾಯಕತ್ವ ಗುಣ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಆಶೀರ್ವಚನ ನೀಡಿದರು.
ಸಾಂಸ್ಕೃತಿಕ ಹಬ್ಬದಲ್ಲಿ ಒಟ್ಟು 15 ವೈವಿಧ್ಯಮಯ ಸ್ಪರ್ಧೆಗಳು ನಡೆದವು. ಬೆಳಗಾವಿಯ 20 ಶಾಲೆಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಳ ಮೌಲ್ಯಮಾಪನಕ್ಕಾಗಿ 30 ನಿರ್ಣಾಯಕರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ 9 ಗಣ್ಯರು ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಸ್ಪರ್ಧೆಗಳ ಫಲಿತಾಂಶದಲ್ಲಿ ಬೆಳಗಾವಿಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆ ಸಮಗ್ರ ಪ್ರಶಸ್ತಿ (ಜನರಲ್ ಚಾಂಪಿಯನ್ಶಿಪ್) ಪಡೆದುಕೊಂಡಿತು. ಮಹಿಳಾ ವಿದ್ಯಾಲಯ ಇಂಗ್ಲಿಷ್ ಮೀಡಿಯಂ ಶಾಲೆ ಹಾಗೂ ಭರತೇಶ ಇಂಗ್ಲಿಷ್ ಮೀಡಿಯಂ ಶಾಲೆಗಳು ಜಂಟಿಯಾಗಿ ರನ್ನರ್ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಪಾತ್ರಾಭಿನಯ, ನಿಧಿ ಶೋಧ, ರೀಲ್ಸ್ ಮತ್ತು ಛಾಯಾಗ್ರಹಣ, ಚಿತ್ರಕಲೆ, ನಾಟಕ, ಪಿಕ್ ???ಂಡ್ ಸ್ಪೀಕ್, ಚಲನಚಿತ್ರ ಗೀತೆ, ಭಾವಗೀತೆ, ಭಾರತೀಯ ಸಂಸ್ಕೃತಿ ಆಧಾರಿತ ಫ್ಯಾಷನ್ ಶೋ, ಜನಪದ ನೃತ್ಯ ಹಾಗೂ ಫೈರ್ಲೆಸ್ ಅಡುಗೆ ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆದವು. ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮೇಶ್ವರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಭು ಶಿವನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ನಾಗನೂರು ಶ್ರೀ ಪ್ರಭುದೇವ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಪ್ನಾ ಜೋಶಿ, ಶ್ರೀ ಸಿದ್ಧರಾಮೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪಪ್ರಾಚಾರ್ಯರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಅಭಿನೇತ್ರಿ, ಕಲಾ ವಿಭಾಗದ ಮುಖ್ಯಸ್ಥೆ ಜಯಶೀಲಾ ಕಟ್ಟಿಮನಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.