ನಾಳೆ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ: ದಾನಿಗಳಿಗೆ ಸನ್ಮಾನ
ಅಥಣಿ 02: ಸಂಕೋನಹಟ್ಟಿಯ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಹಾಗೂ ದಾನಿಗಳ ಸನ್ಮಾನ ಸಮಾರಂಭವನ್ನು ಫೆ. 4 ಮತ್ತು 5 ರಂದು ಹಮ್ಮಿಕೊಳ್ಳಲಾಗಿದ್ದು, ಫೆ.4 ರಂದು ಮುಂಜಾನೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ನಾಂದಣಿಯ ಶ್ರೀ ಕ್ಷೇತ್ರ ಜೈನ ಮಠದ ಜಗದ್ಗುರು ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಶೇಗುಣಸಿಯ ವಿರಕ್ತ ಮಠದ ಮಹಾಂತ ಪ್ರಭು ಮಹಾಸ್ವಾಮಿಗಳು ವಹಿಸುವರು ಎಂದು ವರ್ಧಮಾನ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ ಅಸ್ಕಿ ತಿಳಿಸಿದರು.
ಅವರು ಸಂಸ್ಥೆಯ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ ಮತ್ತು ಮುಖ್ಯ ಅಥಿತಿಗಳಾಗಿ ದಿಲ್ಲಿಯ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಹಣಮಂತ ನೀರಾಣಿ, ಮಾಜಿ ಸಚಿವ ವೀರಕುಮಾರ ಪಾಟೀಲ ವಿವಿಧ ಗಣ್ಯರು ಆಗಮಿಸುತ್ತಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಂಕರ ಪರಗೌಡ ದಡ್ಡಿ ವಹಿಸುವರು ಎಂದು ಹೇಳಿದರು.
ಇದೇ ದಿನ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ನೂತನ ಕಟ್ಟಡದ ಉದ್ಘಾಟನೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಕೌಲಗುಡ್ಡದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ವಹಿಸುವರು, ನೂತನ ಕಟ್ಟಡವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ನ ಸಭಾ ಪತಿ ಬಸವರಾಜ ಹೊರಟ್ಟಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಕಾಗವಾಡ ಶಾಸಕ ರಾಜು ಕಾಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ನ್ಯಾಯವಾದಿ ಆನಂದಕುಮಾರ ಮಗದುಮ್ ಸೇರಿದಂತೆ ಅನೇಕರು ಆಗಮಿಸುವರು ಎಂದು ಹೇಳಿದರು. ಫೆ. 5 ರಂದು ಮುಂಜಾನೆ 9 ಗಂಟೆಗೆ ನಡೆಯಲಿರುವ ನಂದನ ವನದಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು 2023-24 ನೇ ಸಾಲಿನ ಏಳು,ಹತ್ತು ಹಾಗೂ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳ ಬಿಳ್ಕೋಡುವ ಕಾರ್ಯಕ್ರಮ ಮತ್ತು ಹಳೆಯ ವಿದ್ಯಾರ್ಥಿಗಳ ಸಮಾಗಮ ಸಂಭ್ರಮ ನಡೆಯಲಿದ್ದು, ಸಾನಿಧ್ಯವನ್ನು ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಅಧ್ಯಕ್ಷತೆಯನ್ನು ಸುರೇಶ ಪಡನಾಡ ವಹಿಸುವರು ಎಂದ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಸಿ.ಬಿ.ಬಸರಿಖೋಡಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯಧರ್ಶಿ ಅನಂತ ಬಸರಿಖೋಡಿ, ಮುಖ್ಯಾಧ್ಯಾಪಕ ಬಿ.ಪಿ.ಲಡಗಿ ಸೇರಿದಂತೆ ಅನೇಕರು ಆಗಮಿಸುವರು ಎಂದರು.
ಸಂಸ್ಥೆಯ ಕಾರ್ಯದರ್ಶಿ ಅನಂತ ಬಸರಿಖೋಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಗ್ರಾಮೀಣ ಭಾಗದ ಸಂಕೋನಹಟ್ಟಿಯಲ್ಲಿ 1985 ರಲ್ಲಿ ಶಾಲೆ ಆರಂಭಿಸಿದ್ದು ಪರ್ಪ ಪಡನಾಡ ಇವರ ಅಧ್ಯಕ್ಷತೆಯಲ್ಲಿ ಎಂಟು ಎಕರೆ ಜಮೀನಿ ಖರೀದಿಸಿ ಆರಂಭದಲ್ಲಿ ನಾಲ್ಕು ಜನ ಶಿಕ್ಷಕರು 35 ವಿದ್ಯಾರ್ಥಿಗಳಿಂದ ಆರಂಭವಾದ ಪ್ರೌಢಶಾಲೆಯ ಜೊತೆಗೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು 1700 ವಿದ್ಯಾರ್ಥಿಗಳು ಶಿಕ್ಚಣ ಪಡೆಯುತ್ತಿದ್ದು, 75 ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಸಂಸ್ಥೆಯ ನಿರ್ದೇಶಕ ಎ.ಸಿ.ಪಾಟೀಲ ಮಾತನಾಡಿ, ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ತಮ್ಮ ಚಾತುರ್ಮಾಸದ ಸಂದರ್ಭದಲ್ಲಿ ಪಾದಪೂಜೆಯಿಂದ ಬಂದ ದಕ್ಷಿಣೆಯನ್ನು ಸಂಕಷ್ಟದಲ್ಲಿರುವ ನಮ್ಮ ಸಂಸ್ಥೆಗೆ ಆ ದಿನಗಳಲ್ಲಿ ಕೊಡ ಮಾಡಿದ್ದರಿಂದಲೇ ನಮ್ಮ ಸಂಸ್ಥೆ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರಾ ಜೇಂದ್ರ ಪಾಟೀಲ, ಸಿದ್ಧಪ್ಪ ಪಾಟೀಲ, ವೆಂಕಣ್ಣಾ ಬಳೋಜ, ಸುರೇಶ ಪಡನಾಡ, ಅಪ್ಪಾಸಾಹೇಬ ಪಾಟೀಲ, ರಾಮನಗೌಡ ಪಾಟೀಲ, ಬಿ.ಪಿ.ಲಡಗಿ, ಸುನೀಲ ಭೋಸಲೆ, ಅನೀಲ ಚೌಗಲಾ ಮತ್ತು ಮಲ್ಲಯ್ಯ ಸ್ವಾಮಿ ಉಪಸ್ಥಿತರಿದ್ದರು.