ಉತ್ತರ ಕನ್ನಡ : ಕದ್ರಾ, ಮಲ್ಲಾಪುರದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಅಳಲು ಆಲಿಸಿದ ಸಿದ್ಧರಾಮಯ್ಯ
ಕಾರವಾರ: ಕಾರವಾರ ತಾಲೂಕಿನ ಕದ್ರಾ ಮಲ್ಲಾಪುರ ಗ್ರಾಮಗಳಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸೋಮವಾರ ಭೇಟಿ ನೀಡಿ ,ಪ್ರವಾಹ ಸಂತ್ರಸ್ತರ ಅಳಲು ಆಲಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಂದ ಪ್ರವಾಹ ಮಾಹಿತಿ ಪಡೆದರು. ಕದ್ರಾದಲ್ಲಿ ನೆರೆ ಸಂತ್ರಸ್ತರ ನೋವಿನ ಕತೆ ಕೇಳಿದ ಸಿದ್ಧರಾಮಯ್ಯ , ಬಿದ್ದ ಮನೆಗಳ ಅವಶೇಷಗಳನ್ನು ವೀಕ್ಷಿಸಿದರು. ಕೆಪಿಸಿ ಅಧಿಕಾರಿಗಳನ್ನು ನೆರೆ ಸಂತ್ರಸ್ತರ ಸಮ್ಮುಖದಲ್ಲೇ ಪ್ರಶ್ನಿಸಿದ ಘಟನೆ ಸಹ ನಡೆಯಿತು. ಬಿದ್ದ ಮನೆಗಳಿಗೆ ಪರಿಹಾರ ನೀಡಿಲ್ಲ. ಆಹಾರ ಧಾನ್ಯ ಮತ್ತು ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಮನೆಗಳು ಬಿದ್ದು ಹೋಗಿವೆ. 2019ರಲ್ಲಿ ನೆರೆ ಬಂದಾಗಿನ ಪರಿಹಾರವನ್ನೇ ನೀಡಿಲ್ಲ. ಇನ್ನು 2021ರ ಪರಿಹಾರ ನೀಡಲು ಅಧಿಕಾರಿಗಳು ಸಮೀಕ್ಷೆಯ ನಾಟಕ ಆಡುತ್ತಿದ್ದಾರೆ. ಎಲ್ಲದಕ್ಕೂ ಸತಾಯಿಸುವುದು ಈ ಸರ್ಕಾರದ ಚಾಳಿಯಾಗಿದೆ. ಪಟ್ಟಾ ಇಲ್ಲದ ಮನೆಗಳಿಗೆ ಪರಿಹಾರ ನೀಡಿಲ್ಲ ಎಂದು ಸಂತ್ರಸ್ತರು ನೋವನ್ನು ಸಿದ್ದರಾಮಯ್ಯ ಬಳಿ ಹೇಳಿಕೊಂಡರು.
ಕೆಪಿಸಿ ಅಧಿಕಾರಿಗಳು ತರಾಟೆಗೆ :
ನೆರೆ ಬಂದ ಅನುಭವ 2019ರಲ್ಲಿ ಇತ್ತು. ಹಾಗಾಗಿ ಅಣೆಕಟ್ಟಿನಿಂದ ನೀರು ಬಿಡುವ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ನೀವು ಸೋತಿದ್ದೀರಿ. ನದಿ ದಂಡೆಯ ಪ್ರತಿ ಮನೆಯಿಂದ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೇ ಎಂಬುದನ್ನು ಸಂಬಂಧಪಟ್ಟವರು ಖಾತ್ರಿ ಪಡಿಸಿಕೊಂಡಿದ್ದೀರಾ ಎಂದು ಅರಣ್ಯ ಅಧಿಕಾರಿ, ಕೆಪಿಸಿ ಅಧಿಕಾರಿ ಹಾಗೂ ಕಂದಾಯ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದನ್ನು ಇಡೀ ಸನ್ನಿವೇಶ ಸೂಚಿಸುತ್ತದೆ ಎಂದು ಸಿದ್ಧರಾಮಯ್ಯ ಅವರು ಕೆಪಿಸಿ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಸಂತ್ರಸ್ತರನ್ನು ಪಟ್ಟಾ ಇಲ್ಲದ ಮನೆಗಳಿಂದ ವಕ್ಕಲೆಬ್ಬಿಸಬೇಡಿ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದ ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಯಲ್ಲಿ ಖಾಲಿ ಬಿದ್ದಿರುವ ಮನೆಗಳನ್ನು ನಿರಾಶ್ರಿತರಿಗೆ ಉಳಿಯಲು ಕೊಡಿ ಎಂದರು.
ಎಂ.ಡಿ.ಯಿಂದ ಆದೇಶ ಕೊಡಿಸಿ :
ಕೆಪಿಸಿಯಲ್ಲಿ ಬಳಸದೇ ಬಿಟ್ಟ ಮನೆಗಳನ್ನು ಸಂತ್ರಸ್ತರಿಗೆ ನೀಡಿ. ಬಡವರ ಬಗ್ಗೆ ಕರುಣೆ, ಕಳಕಳಿ ಇಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ನವರು ಕೆಪಿಸಿ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೋರ್ವರು ಕೆಪಿಸಿ ಮ್ಯಾನೇಜಿಂಗ್ ಡೈರೆಕ್ಟರ್ ರಿಂದ ನಿರ್ದೇಶನ ಕೊಡಿಸಿಬಿಡಿ ಸರ್ ಎಂದರು. ಆಯ್ತು ಬಿಡಪ್ಪ, ಸರ್ಕಾರದ ಜೊತೆ, ಕೆಪಿಸಿ ಎಂಡಿ ಜೊತೆ ಮಾತನಾಡುವೆ. ನೀವು ಮಾನವೀಯತೆಯಿಂದ ನೆಡೆದುಕೊಳ್ಳಿ. ಹಾಗೂ ನೆರೆ ಸಂತ್ರಸ್ತರಿಗೆ ತೊಂದರೆ ನೀಡಬೇಡಿ ಎಂದರು.
ಶಾಶ್ವತ ಪರಿಹಾರಕ್ಕೆ ಯತ್ನ :
ಕೆಪಿಸಿ ಬಳಿ 7 ಎಕರೆ ಭೂಮಿ ಇದೆ. ಅಲ್ಲಿ ಬಹುಮಹಡಿ ಕಟ್ಟಿ ಸಂತ್ರಸ್ತರಿಗೆ ನೀಡುವುದು ಈಗ ಉಳಿದಿರುವ ದಾರಿ. ಸಾಮಾಜಿಕ ಜವಾಬ್ದಾರಿ ಅಡಿ ಕೆಪಿಸಿ ಮತ್ತು ಕೈಗಾ (ಎನ್ಪಿಸಿಎಲ್) ಗಳು ಬಹುಮಹಡಿ ಕಟ್ಟಡ ಕಟ್ಟಿ ನದಿ ದಂಡೆಯ ನೆರೆ ಸಂತ್ರಸ್ತರಿಗೆ ನೀಡಬೇಕು. ಆಗ ಪ್ರವಾಹಕ್ಕೆ ಪ್ರತಿ ವರ್ಷ ಸಿಲುಕುವ ಜನರಿಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯ. ಬಹುಮಹಡಿ ಕಟ್ಟುವ ಜವಾಬ್ದಾರಿಯನ್ನು ಸರ್ಕಾರ ಸಹ ನಿರ್ವಹಿಸಬೇಕು. ಇಲ್ಲವೇ ನದಿ ದಂಡೆಯ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸಿ, ಅವರಿಗೆ ಎತ್ತರದ ಪ್ರದೇಶದಲ್ಲಿ ಪ್ರತ್ಯೇಕ ವಸತಿ ಕಲ್ಪಿಸಬೇಕು. ಇದನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನಲ್ಲಿ ಮಾಡಿದ್ದೇವು. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲ. ಇದನ್ನು ಈಗಿನ ಸರ್ಕಾರ ಮಾಡುವಂತೆ ವಿಧಾನಸಭಾ ಅಧಿವೇಶನದಲ್ಲಿ ದನಿ ಎತ್ತುವೆ ಎಂದರು. ಕಾಂಗ್ರೆಸ್ ಹಿರಿಯ ನಾಯಕ ದೇಶಪಾಂಡೆ ಮಾತನಾಡಿ ನನ್ನ ಕೆಪಿಸಿ ಒಡನಾಟ 30 ವರ್ಷದಷ್ಟು ಹಳೆಯದು. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವೆ ಎಂದರು. ಮಾಜಿ ಶಾಸಕ ಸೈಲ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ , ಶಂಭು ಶೆಟ್ಟಿ , ಚೈತ್ರಾ ಕೊಠಾರಕರ್, ಸುಮಾ ಉಗ್ರಾಣಕರ್, ಸುಶ್ಮಾ ರೆಡ್ಡಿ, ಮಾಜಿ ಶಾಸಕ ಮಂಕಾಳು ವೈದ್ಯ, ಪ್ರಶಾಂತ ದೇಶಪಾಂಡೆ , ಕೃಷ್ಣ ಮೆಹಥಾ ಇದ್ದರು.