ಶ್ರೀಸಂತ ಶಿರೋಮಣಿ ರೋಹಿದಾಸ ಮಹಾರಾಜರ ಜಯಂತಿ
ರೋಹಿದಾಸರ ಮೂರ್ತಿ ಪ್ರತಿಷ್ಠಾಪನೆ: ಇಂದಿನಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ವೆಂಕಟೇಶ ದೇಶಪಾಂಡೆ
ಅಥಣಿ 14: ಶ್ರೀಸಂತ ಶಿರೋಮಣಿ ರೋಹಿದಾಸ ಮಹಾರಾಜರ ಜಯಂತಿ ಅಂಗವಾಗಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ರೋಹಿದಾಸರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಫೆ.15 ಹಾಗೂ 16 ರಂದು ಎರಡು ದಿನ ನಡೆಯಲಿವೆ ಎಂದು ಗ್ರಾಮ ಪಂಚಾಯತ ಸದಸ್ಯ ಸಂಜಯ ಅದಾಟೆ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಸಂತ ರೋಹಿದಾಸ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಫೆ.15 ರಂದು ಮುಂಜಾನೆ 9 ಗಂಟೆಗೆ ಕುಂಭ ಮೇಳ ಹಾಗೂ ಸಕಲ ವಾದ್ಯಗಳೊಂದಿಗೆ ಮದಭಾವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುವುದು. ಫೆ.16 ಬುಧವಾರದಂದು ಮುಂಜಾನೆ 8 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಮದಭಾವಿಯ ಶನಿ ಮಂದಿರದ ಪ್ರಧಾನ ಅರ್ಚಕ ಪ್ರವೀಣ ಶಾಸ್ತ್ರಿ ಹಿರೇಮಠ, ಮದಭಾವಿಯ ಅಪ್ಪಯ್ಯಾ ಹಿರೇಮಠ, ತಮ್ಮಯ್ಯ ಹಿರೇಮಠ ವಹಿಸುವರು ಎಂದು ತಿಳಿಸಿದರು.
ರೋಹಿದಾಸ ಮಹಾರಾಜರ ಮೂರ್ತಿಯನ್ನು ಸುಮಾರು 3 ಲಕ್ಷ ರೂ.ವೆಚ್ಚದಲ್ಲಿ ರಾಜಸ್ಥಾನದಲ್ಲಿ ನಿರ್ಮಿಸಲಾಗಿದೆ. ಸಂತ ರೋಹಿದಾಸರು ಪ್ರಸಿದ್ಧ ಕವಿಯಾಗಿದ್ದರು. ಇವರು ಚರ್ಮಕಾರ ಸಮಾಜದಲ್ಲಿ ಉತ್ತರ ಭಾರತದಲ್ಲಿ 14 ನೇ ಶತಮಾನದಲ್ಲಿ ಅವತರಿಸಿದರು. ಬಾಲ್ಯದಿಂದಲೂ ಭಕ್ತಿ ಮಾರ್ಗದಲ್ಲಿ ಆಸಕ್ತಿ ಹೊಂದಿದ್ದ ಮಹಾರಾಜರು ಸಂಸಾರ ಸುಖಕ್ಕೆ ಅಂಟಿಕೊಳ್ಳದೆ ಹರಳಯ್ಯ ಸಮಾಜದ ಮಾರ್ಗದರ್ಶಕರಾದರು ಎಂದರು.
ಸಂತ ರೋಹಿದಾಸ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗಾಗಿ ಮದಭಾವಿಯಲ್ಲಿರುವ 500ಕ್ಕೂ ಹೆಚ್ಚು ಚರ್ಮಕಾರ ಕುಟುಂಬಗಳು ದೇಣಿಗೆ ನೀಡಿವೆ ಎಂದ ಅವರು ಪ್ರತಿ ವರ್ಷವೂ ಕೂಡ ಮಹಾರಾಜರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, 2 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಹರಳಯ್ಯ ಸಮಾಜದ ವಸಂತ ಅಭ್ಯಂಕರ, ನಾಯ್ಕೋಬಾ ಶಿಂಧೆ, ಪರಶುರಾಮ ಶಿಂಧೆ, ಹಣಮಂತ ಭಂಡಾರೆ, ಚುಡಪ್ಪಾ ಭಂಡಾರೆ, ಸೂರಜ ಶಿಂಧೆ, ಋತಿಕ ಕಾಂಬಳೆ, ಪರಶುರಾಮ ಮರಾಠೆ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.