ನಿವೃತ್ತ ಮುಖ್ಯೋಪಾಧ್ಯಾಯ ಎಂ. ಎಂ. ಪೂರ್ವಿಮಠಗೆ ಶ್ರದ್ಧಾಂಜಲಿ
ಯರಗಟ್ಟಿ 05: ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಂ. ಎಂ. ಪೂರ್ವಿಮಠ ಗುರುಗಳ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಕ.ಸಾ.ಪ. ಅಧ್ಯಕ್ಷ ರಾಜೇಂದ್ರ ವಾಲಿ ಸಾವಿರಾರು ವಿದ್ಯಾರ್ಥಿಗಳ ಬಾಳಿನ ಬೆಳಕಾಗಿ ಶಿಕ್ಷಣ ನೀಡುವ ಜ್ಯೋತಿಯಾಗಿ ಸಮಾಜದ ಜನರ ಬೆಳಕಾಗಿ ಧಾರ್ಮಿಕ ಆಚರಣೆಯ ಶಿವಭಕ್ತ ನಾಗಿ ನಮ್ಮೆಲ್ಲರನ್ನು ಅಗಲಿದ ಗುರುಗಳು ಯರಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಮ್ಮ ಸೇವೆಯನ್ನು ನೀಡಿ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿದ್ದರು ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದರು.
ಗುರು ಶಬ್ದದ ಅರ್ಥಕ್ಕೆ ಅನ್ವರ್ಥರಾಗಿ ಬದುಕನ್ನು ಸಮಾಜ ಮುಖಿಯಾಗಿಸಿಕೊಂಡು ಸಮರ್ಥ ಶಿಕ್ಷಕರಾಗಿದ್ದವರು, ಆಧ್ಯಾತ್ಮಿಕ ಪರಿಸರವನ್ನು ಸೃಷ್ಟಿಸಿ ಅಲೌಕಿಕ ಭಕ್ತಿ ಪಥದಲ್ಲಿ ಸಂಚರಿಸಿ ನಮಗೆ ಬೆಳಕಾದವರು, ನಾಟಕ ರಚನಾಕಾರರು, ಕಲಾವಿದರು, ನಾಟಕ ನಿರ್ದೇಶಕರು, ಹಲವಾರು ಕಲಾವಿದರನ್ನು ಬೆಳೆಸಿದವರು, ಕಲಾವಿದರನ್ನಾಗಿ ಮಾಡಿದವರು, ಭಜನಾ ಮಂಡಳಿ ಗಳನ್ನು ಕಟ್ಟಿ ಕಲಿಸಿ ಮಾರ್ಗದರ್ಶನ ಮಾಡಿ ಮುನ್ನಡಿಸಿದವರು, ಸಮಾಜ ಸಂಘಟಕರು, ಶಾಲೆಯ ಒಳಗೆ ಶಾಲೆಯ ಹೊರಗೆ ಗುರುಗಳಾಗಿದ್ದವರು, ನಡೆದರೆ ಗೌರವ, ನುಡಿದರೆ ಗೌರವ, ಕಾಯಕವನ್ನು ಪ್ರಾಮಾಣಿಕ ವಾಗಿಸಿಕೊಂಡು, ಕಾಯವನ್ನು ಪ್ರಸಾದಕಾಯಕವಾಗಿಸಿದ ನಿಜಜಂಗಮ ಮೂರ್ತಿಯ ಯಾದವರು ಎಂದು ಹೇಳಿದರು.
ಎಂ. ಬಿ. ವಾಲಿ, ಎ. ಎಂ. ಹಾದಿಮನಿ, ಮಹಾಂತೇಶ ಜಕಾತಿ, ಶಿವಾನಂದ ಯರಗಣವಿ, ತಮ್ಮಣ್ಣಾ ಕಾಮಣ್ಣವರ, ಎಸ್. ಎಸ್. ಕುರುಬಗಟ್ಟಿಮಠ, ಎಂ. ಎಸ್. ಚೆಟ್ಟಿ, ಶ್ರೀಶೈಲ ವಾಲಿ, ಅಶೋಕ ಗಾಣಿಗಿ, ಶಿವಾನಂದ ಪಟ್ಟಣಶೆಟ್ಟಿ, ಮೋಹನ ಹಾದಿಮನಿ, ಈರಣ್ಣಾ ಮಠಪತಿ, ಡಾ. ವಿಶ್ವನಾಥ ತಾಂವಶಿ, ಡಾ. ವಿ. ಎಂ. ಪಟ್ಟಣ, ಸದಾನಂದ ಹಣಬರ, ಈರ್ಪ ಹಾದಿಮನಿ ಹಾಗೂ ಅಕ್ಕನ ಬಳಗದ ಸದಸ್ಯರು ಸೇರಿದಂತೆ ಅನೇಕ ಇದ್ದರು.