ಚರಂಡಿ ನೀರಿನಿಂದ ಆವೃತಗೊಂಡ ಶಿವಶಕ್ತಿ ನಗರ, ಸಮಸ್ಯೆಗೆ ಪರಿಹಾರ ಕೋರಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ನಿವಾಸಿಗಳ ಮನವಿ
ಲೋಕದರ್ಶನ ವರದಿ
ವಿಜಯಪುರ 28 : ಶಹರದ ವಾರ್ಡ ನಂ: 15ರ ಶಿವಶಕ್ತಿ ನಗರದ ಸಮಸ್ತ ನಿವಾಸಿಗಳು ಮಣಿಕಂಠ ಫೌಂಡೇಶನ ಸಹಯೋಗದೊಂದಿಗೆ ಇಂದು ವಿಜಯಪುರ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಿಗೆ ಭೇಟಿಯಾಗಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಅವರ ಬೇಡಿಕೆಯಂತೆ ಬಡಾವಣೆಯ ಸಮೀಪದಲ್ಲಿ ಉದ್ಯಮಿ ಪಾರೇಖ ಇವರಿಂದ ನಿರ್ಮಿಸಲಾದ ಪಾನಿ ನಗರ (ಲೇಓಟ್) ಇದ್ದು, ಸದರಿ ಪಾನಿ ನಗರದಲ್ಲಿ ಸುಮಾರು 250 ಕುಟುಂಬಗಳು ವಾಸವಿದ್ದು, ಅಲ್ಲಿನ ಚರಂಡಿ ನೀರಿನ (ತ್ಯಾಜ್ಯ ಸಂಸ್ಕರಣಾ ಘಟಕ)ವ್ಯವಸ್ಥೆಯು ಸಂಪೂರ್ಣ ಹದಗೆಟ್ಟು ಪಾನಿ ನಗರದ ಗಾರ್ಡನ್‌ನಲ್ಲಿ ತುಂಬಿ ಹರಿದು ಹೊರಬರುವ ಸಂಪೂರ್ಣ ಚರಂಡಿ ನೀರು ನಮ್ಮ ಬಡಾವಣೆಯಲ್ಲಿ ಸೇರಿಕೊಂಡು ರಸ್ತೆಯ ಮೇಲೆ ಮತ್ತು ನಮ್ಮ-ನಮ್ಮ ಮನೆ ಬಾಗಿಲಿನಲ್ಲಿ ಜಮಾ ಆಗುತ್ತಿದೆ.
ಇದರಿಂದ ಬಡಾವಣೆಯಲ್ಲಿ ವಯೋ ವೃದ್ದರು. ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದು, ಈ ಸಂಬಂಧ ಪಾನಿ ನಗರ ಲೇಓಟ್ ನಿರ್ಮಿಸಿರುವ ಪಾರೇಖ ಸೇಠಜಿ ಇವರಿಗೆ ಹಲವು ಬಾರಿ ಭೇಟಿಯಾಗಿ ಮೌಖಿಕವಾಗಿ ತಿಳಿಸಿದಾಗ ಸದರಿ ವ್ಯಕ್ತಿಯು “ನಿಮ್ಮ ಸಮಸ್ಯೆಗೆ ನಾನೇನು ಮಾಡಲಿ, ನೀವು ಸ್ಲಂನಲ್ಲಿ ವಾಸಿಸುವವರು ನಿಮಗೆ ಇದಲ್ಲೆ ರೂಢಿ ಇರುತ್ತೆ ಒಂದು ವೇಳೆ ನಿಮ್ಮಲ್ಲಿ ಯಾರಾದರೂ ಸತ್ತರೂ ಕೂಡಾ ಅದಕ್ಕೆ ನಾನೇನು ಹೊಣೆ ಅಲ್ಲ. ನನ್ನ ಬಳಿ ಬರಬೇಡಿ ಹೋಗಿ ಇಲ್ಲಿಂದ" ಅಂತಾ ಉಡಾಫೆಯಾಗಿ ಮಾತನಾಡಿ ಕಳುಹಿಸಿರುತ್ತಾನೆ.
ಮುಂದೆ ಬಡಾವಣೆಯ ಮಹಿಳೆಯರು ಸೇರಿ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದಾಗ ಸದರಿ ಲೇಓಟ್ ನಿರ್ಮಿಸಿದ ವ್ಯಕ್ತಿಯು ಒಂದು ಬಾರಿ ಮಾತ್ರ ಕಾಟಾಚಾರಕ್ಕೆ ಎಂಬಂತೆ ಚರಂಡಿ ನೀರನ್ನು ಅಲ್ಪಸ್ವಲ್ಪ ತೆರವುಗೊಳಿಸಿದ್ದು, ಯಾವುದೇ ರೀತಿಯಿಂದ ಚರಂಡಿ ನೀರು ಹರಿದು ಬರದಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದರಿಂದ ಸಾರ್ವಜನಿಕರು ಮಕ್ಕಳು ವಯೋವೃದ್ಧರ ಆರೋಗ್ಯದ ಮೇಲೆ ತೀವ್ರ ಅಡ್ಡ ಪರಿಣಾಮ ಉಂಟಾಗಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರಿಯವರು ಈ ಸಮಸ್ಯೆ ಕುರಿತು ಅತೀ ಜರೂರಾಗಿ ಸೂಕ್ತ ಕ್ರಮ ಕೈಗೊಂಡು ಚರಂಡಿ ನೀರು ನಮ್ಮ ಬಡಾವಣೆಯಲ್ಲಿ ಪ್ರವೇಶಿಸದಂತೆ ಬಂದೋಬಸ್ತ ಮಾಡಿಸಿ ಹಾಗೂ ಸದರಿ ಪರಿಸರ ಮಾಲಿನ್ಯಕ್ಕೆ ಕಾರಣರಾದ ವ್ಯಕ್ತಿಗಳ ಮೇಲೆ ಕಾನೂನಿನ್ವಯ ಕ್ರಮಕೈಗೊಳ್ಳಲು ಆಗ್ರಹಿಸಿದರು. ಒಂದು ವೇಳೆ ಸದರಿ ಸಮಸ್ಯೆಯ ಕುರಿತು ಅತೀ ತುರ್ತಾಗಿ ಕ್ರಮವಾಗದೇ ಇದ್ದ ಪಕ್ಷದಲ್ಲಿ ನಾವು ಶಿವಶಕ್ತಿ ನಗರದ ಸಮಸ್ತ ನಿವಾಸಿಗಳು ಸೇರಿಕೊಂಡು ವಿಜಯಪುರದಿಂದ ಸೋಲಾಪೂರ ಮಾರ್ಗಕ್ಕೆ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಮ್ಮ ಸಮಸ್ಯೆಗೆ ಪರಿಹಾರ ಕೋರಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಬೇಡಿಕೆ ಈಡೇರಿಕೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.