ಮಾ.2ರಿಂದ ಶಿಂದಿಕುರಬೇಟ ಮಾಯಕ್ಕಾದೇವಿ ಜಾತ್ರಾ ಮಹೋತ್ಸವ
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಮಾಯಕ್ಕಾದೇವಿ ಜಾತ್ರಾ ಮಹೋತ್ಸವ ಎರಡು ದಿನಗಳವರೆಗೆ ವಿಜೃಂಭನೆಯಿಂದ ಜರುಗಲಿದೆ.
ದಿ.2 ರಂದು ಸಂಜೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿಗಳ ಆಗಮನ ನಂತರ ವಿವಿಧ ಗ್ರಾಮಗಳಿಂದ ವಾಲಗಗಳು ಆಗಮಿಸುವವು.ರಾತ್ರಿ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ನಂತರ ಡೊಳ್ಳಿನ ಮತ್ತು ಭಜನಾ ಪದಗಳು ಜರುಗುವುದು.
ದಿ.3ರಂದು ಬೆಳಿಗ್ಗೆ ವಾಲಗ ಬಾರಿಸುವುದು. ಮುಂಜಾನೆ ಮಾಯಕ್ಕಾದೇವಿಯ ರುದ್ರಾಭಿಷೇಕ ಜರುಗಲಿದೆ.ಮಧ್ಯಾಹ್ನ ಮಹಾಪ್ರಸಾದ ನಡೆಯಲಿದೆ. ಮುಂಜಾನೆ ಜಮಖಂಡಿ ತಾಲೂಕಿನ ಮುತ್ತುರ ಗ್ರಾಮದ ಕಾಶಿಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಮತ್ತು ಮುದ್ದೇಬಿಹಾಳ ತಾಲೂಕಿನ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ತುರಸಾ-ತುರಸಿನ ಡೊಳ್ಳಿನ ಪದಗಳು ಜರುಗಲಿವೆ. ಸಂಜೆ ಫಲ್ಲಕ್ಕಿ ಉತ್ಸವ ನಂತರ ಭಂಡಾರ ಹಾರಿಸುವ ಕಾರ್ಯಕ್ರಮ ಜರುಗಲಿದ್ದು ಜಾತ್ರಾ ಕಾರ್ಯಕ್ರಮಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ಚೇರಮನ್ ಭೀಮಶಿ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಮಮದಾಪೂರ ಗ್ರಾ.ಪಂ ಸದಸ್ಯ ಸುರೇಶ ಸನದಿ ಸೇರಿದಂತೆ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ಮಾಯಕ್ಕಾದೇವಿ ಜಾತ್ರಾ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.